Advertisement

ಬಜೆಟ್‌ಗೆ ರಾಜ್ಯ ಬಿಜೆಪಿ ಮೆಚ್ಚುಗೆ

01:43 AM Jul 06, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಆಯವ್ಯಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ನಾಯಕರು ಸಮಾಜದ ಎಲ್ಲ ವರ್ಗದ ಜನರನ್ನು ತಲು ಪುವ ಹಾಗೂ ಸದೃಢ ಅರ್ಥ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿರುವ ಬಜೆಟ್ ಮಂಡನೆಯಾಗಿದೆ ಎಂದು ಶ್ಲಾಘಿಸಿದ್ದಾರೆ. ರೈತ, ಮಹಿಳಾ, ದುರ್ಬಲ ವರ್ಗದವರ ಏಳಿಗೆಗೆ ಮಂಡನೆಯಾದ ಆಯವ್ಯಯ ಎಂದು ಬಣ್ಣಿಸಿದ್ದಾರೆ.

Advertisement

ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್ ಸಮಾಜದ ಎಲ್ಲರನ್ನು ಒಳಗೊಂಡ, ಎಲ್ಲ ವರ್ಗದ ಜನರನ್ನು ತಲುಪುವ ಆಯವ್ಯಯವಾಗಿದೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಹಾಗೂ ಸಬ್‌ ಕಾ ವಿಶ್ವಾಸ್‌’ ಎಂಬ ಘೋಷವಾಕ್ಯಕ್ಕೆ ಪೂರಕವಾಗಿ ಆಯವ್ಯಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ಹೇಳಿದ್ದಾರೆ.

ರೈತರು, ಉದ್ದಿಮೆದಾರರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಮೀನುಗಾರರನ್ನು ಒಳಗೊಂಡಂತೆ ಎಲ್ಲ ವರ್ಗದ ಜನರ ಆಶಯ, ವಿಶ್ವಾಸ, ಆಕಾಂಕ್ಷೆಗಳಿಗೆ ಅನುಗುಣವಾಗಿ ಅಗತ್ಯ ಸೌಲಭ್ಯ, ಯೋಜನೆಗಳನ್ನು ಒಳಗೊಂಡ ಆಯವ್ಯಯ ಮಂಡನೆಯಾಗಿದೆ. ಮುಖ್ಯವಾಗಿ ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲಾಗಿದೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು, ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು 10,000 ಹೊಸ ಕೃಷಿಕರ ಸಂಘ ಸ್ಥಾಪನೆ. ಜಲಶಕ್ತಿ ಸಚಿವಾಲಯ ಸ್ಥಾಪನೆ, ಜಲಸಂವರ್ಧನೆ, ಕುಡಿಯುವ ನೀರು ಯೋಜನೆಗೆ ಮೊದಲ ಆದ್ಯತೆ. ಗ್ರಾಮೀಣ ಪ್ರದೇಶದ ಬಡವರಿಗೆ 1.95 ಕೋಟಿ ಮನೆಗಳ ನಿರ್ಮಾಣ, ನಗರ ಪ್ರದೇಶದ ಜನರಿಗೆ 91 ಲಕ್ಷ ಮನೆಗಳ ನಿರ್ಮಾಣ, ಕೃಷಿ ಕೈಗಾರಿಕೋದ್ಯಮದಲ್ಲಿ 75000 ಹೊಸ ಉದ್ದಿಮೆದಾರರಿಗೆ ಅವಕಾಶ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 80,250 ಕೋಟಿ ರೂ. ವೆಚ್ಚದಲ್ಲಿ 1.25 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆಗಳ ನಿರ್ಮಾಣ. ಒಟ್ಟಾರೆ ದೇಶದ ಅಭಿವೃದ್ಧಿಗೆ ಪೂರಕವಾದ ಸರ್ವರನ್ನು ಒಳಗೊಂಡ ಹಾಗೂ ಸದೃಢ ಅರ್ಥವ್ಯವಸ್ಥೆಯನ್ನು ರೂಪಿಸುವ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ನವ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್: ಆರ್ಥಿಕ ಕ್ರಾಂತಿ ಸೃಷ್ಟಿಸುವ ದೂರದೃಷ್ಟಿ ಬಜೆಟ್ ಇದಾಗಿದೆ. 10 ವರ್ಷದಲ್ಲಿ ಐದು ಟ್ರಿಲಿಯನ್‌ ಡಾಲರ್‌ ಪ್ರಗತಿ ಸಾಧಿಸುವಂತಹ ಆಕಾಂಕ್ಷೆಯುಳ್ಳ ಬಜೆಟ್ ಇದಾಗಿದೆ. ಕೃಷಿ, ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣ, ಎಲ್ಲರಿಗೂ ಪೈಪ್‌ ಮೂಲಕ ಕುಡಿಯುವ ನೀರು, ಎಲ್ಲ ಮನೆಗಳಿಗೂ ವಿದ್ಯುದ್ಧೀಕರಣ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಇತರೆ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ‘ನವ ಭಾರತ’ ನಿರ್ಮಿಸುವ ಸಲುವಾಗಿ ಸರಿಯಾದ ದಿಕ್ಕಿನಲ್ಲಿರುವ ಬಜೆಟ್ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.

ಕಾಯಕವೇ ಕೈಲಾಸ ಕಾರ್ಯಶೈಲಿ
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್ 12ನೇ ಶತಮಾನದಲ್ಲಿ ಅಂದಿನ ಸಂಸತ್‌ ಸ್ಥಾಪಕರೆಂದೇ ಬಿಂಬಿತರಾದ ಕಾಯಕಯೋಗಿ ಅಣ್ಣ ಬಸವಣ್ಣನವರ ತತ್ವ ‘ಕಾಯಕವೇ ಕೈಲಾಸ’ ಎಂಬ ಕಾರ್ಯ ಶೈಲಿಯ ಬಜೆಟ್ ಆಗಿದೆ. ‘ಕಾಯಕವೇ ಕೈಲಾಸ’ ಎಂಬ ತತ್ವದಂತೆ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಸಂಸ್ಕೃತಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ 2019-2020ನೇ ಸಾಲಿನ ಬಜೆಟ್‌ನಲ್ಲಿ ಮೊಳಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಣ್ಣಿಸಿದ್ದಾರೆ.

Advertisement

ಕೇಂದ್ರ ಬಜೆಟ್‌ ಜನೋಪಯೋಗಿಯಾಗಿದೆ. ದೇಶದಲ್ಲಿ ಎಲ್ಲಕಡೆ ಮೂಲಸೌಕರ್ಯ ಕಲ್ಪಿಸಲು 1 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆ ಹಾಗೂ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ.
– ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next