Advertisement

ಸಣ್ಣ, ಮಧ್ಯಮ ಉದ್ಯಮಗಳತ್ತ ಕಿರುನಗೆ

10:46 AM Jul 07, 2019 | Sriram |

ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಹಾಗೂ ಉದ್ದಿಮೆಗಳತ್ತ (ಎಂಎಸ್‌ಎಂಇ) ಗಮನಹರಿಸಿರುವ ಕೇಂದ್ರ ಎನ್‌ಡಿಎ ಸರ್ಕಾರ, ಸುಲಭ ಹಾಗೂ ತ್ವರಿತ ಸಾಲ ನೀಡುವಿಕೆ, ಆನ್‌ಲೈನ್‌ ಪಾವತಿ ವ್ಯವಸ್ಥೆಗೆ ಪ್ರತ್ಯೇಕ ಪೋರ್ಟಲ್, ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳಲ್ಲಿ ತಯಾರಾಗುವ ವಸ್ತು, ಉತ್ಪನ್ನಗಳಿಗೆ ಇ-ಕಾಮರ್ಸ್‌ ಮಾರುಕಟ್ಟೆ ಒದಗಿಸುವ ಭರವಸೆ ನೀಡಿದೆ.

Advertisement

ಆನ್‌ಲೈನ್‌ ಪೋರ್ಟಲ್ ಮೂಲಕ ಎಂಎಸ್‌ಎಂಇಗಳಿಗೆ ಕೇವಲ 59 ನಿಮಿಷದಲ್ಲಿ ಒಂದು ಕೋಟಿ ರೂ.ಗಳವರೆಗೆ ಸಾಲ ಸೌಲಭ್ಯ ಒದಗಿಸುವುದಾಗಿ ಹೇಳಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕಿರು ಉದ್ದಿಮೆದಾರರ ಆರ್ಥಿಕ ಸ್ವಾವಲಂಬನೆ ಕನಸಿಗೆ ನೀರೆರೆದಿದ್ದಾರೆ. ಇದೇ ವೇಳೆ 2019-20ನೇ ಸಾಲಿನಲ್ಲಿ ಎಂಎಸ್‌ಎಂಇಗಳಿಗೆ ಬಡ್ಡಿ ಸಬ್ಸಿಡಿ ಯೋಜನೆಯಡಿ 350 ಕೋಟಿ ರೂ. ಅನುದಾನ ಮೀಸಲಿ ರಿಸಿದ್ದು, ಎಲ್ಲ ಜಿಎಸ್‌ಟಿ ನೋಂದಾಯಿತ ಎಂಎಸ್‌ಎಂಇ ಗಳಿಗೆ ಶೇ.2ರ ಬಡ್ಡಿ ದರದಲ್ಲಿ ಹೊಸ ಅಥವಾ ಹೆಚ್ಚುವರಿ ಸಾಲ (ಇಂಕ್ರಿಮೆಂಟಲ್ ಲೋನ್‌) ನೀಡಲಾಗುತ್ತಿದೆ.

ಬಾಕಿ ವಿಳಂಬಕ್ಕೆ ಮುಕ್ತಿ: ಎಸ್‌ಎಂಇ ಮತ್ತು ಎಂಎಸ್‌ಎಂಇ ಕ್ಷೇತ್ರದಲ್ಲಿನ ಹಣದ ವಹಿವಾಟಿನಲ್ಲಿ ಸರಬರಾಜು ದಾರರು ಮತ್ತು ಗುತ್ತಿಗೆದಾರರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಇವರಿಗೆ ಸರ್ಕಾರದಿಂದ ಸರಿಯಾದ ಸಮಯಕ್ಕೆ ಬಾಕಿ ಹಣ ಪಾವತಿಯಾದರೆ ಕಿರು ಉದ್ಯಮ ವಲಯ ಆರ್ಥಿಕವಾಗಿ ಸುಧಾರಣೆ ಹೊಂದಲಿದೆ. ಈ ನಿಟ್ಟಿನಲ್ಲಿ ಹಣ ಪಾವತಿ ತಡವಾಗದಂತೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹೇಳಿದೆ. ಹಾಗೇ, ಉದ್ಯಮಿಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಬಿಲ್ಗಳನ್ನು ಸಿದ್ಧಪಡಿಸಲು ಮತ್ತು ಹಣ ಪಾವತಿಗಾಗಿ ಪ್ರತ್ಯೇಕ ವೆಬ್‌ ಪೋರ್ಟಲ್ ಒಂದನ್ನು ಸರ್ಕಾರ ಆರಂಭಿಸಲಿದೆ.

ಹೂಡಿಕೆಗೆ ಆದ್ಯತೆ: ಉದ್ಯಮ ಕ್ಷೇತ್ರದ ಪ್ರಗತಿಗೆ ಬಂಡವಾಳ ಹೂಡಿಕೆ ಅಗತ್ಯವಾಗಿದ್ದು, ಭಾರತಕ್ಕೆ ವಾರ್ಷಿಕ 20 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಂಡವಾಳ ಆಕರ್ಷಣೆಗೆ ಹಲವು ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಹಿಂದೆ ಆರ್‌ಬಿಐ ಅಧಿಸೂಚನೆ ಹೊರಡಿಸಿದಂತೆ 2019-20ರಲ್ಲಿ ಕ್ರೆಡಿಟ್ ಗ್ಯಾರಂಟಿ ಎನ್‌ಹ್ಯಾನ್ಸ್‌ಮೆಂಟ್ ಕಾರ್ಪೊರೇಷನ್‌ ಸ್ಥಾಪಿಸುವುದಾಗಿ ಮತ್ತು ಮೂಲ ಸೌಲಭ್ಯ ಕ್ಷೇತ್ರವನ್ನು ಮುಖ್ಯವಾಗಿಸಿಕೊಂಡು, ದೀರ್ಘ‌ ಕಾಲಿಕ ಮತ್ತು ಕಾರ್ಪೊರೇಟ್ ಒಪ್ಪಂದಗಳಿಗೆ ಆದ್ಯತೆ ನೀಡುವುದಾಗಿ ಕೇಂದ್ರ ತಿಳಿಸಿದೆ.

ಇದರೊಂದಿಗೆ ನೋಂದಾಯಿತ ಕಂಪನಿಗಳಲ್ಲಿ ಕನಿಷ್ಠ ಸಾರ್ವಜನಿಕ ಪಾಲುದಾರಿಕೆಯನ್ನು ಹೆಚ್ಚಿಸಲು ಇದು ಸಕಾಲವಾಗಿದ್ದು, ಇದಕ್ಕಾಗಿ ಸದ್ಯ ಇರುವ ಶೇ.25ರಿಂದ ಶೇ.35ರವರೆಗಿನ ಪಾಲುದಾರಿಕೆ ಮಿತಿಯನ್ನು ಹೆಚ್ಚಿಸಲು ಸಿಬಿಗೆ ಸೂಚಿಸಿರುವುದಾಗಿ ವಿತ್ತ ಸಚಿವೆ ತಿಳಿಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆ ಅಡಿ ತರುವ ನಿಟ್ಟಿನಲ್ಲಿ ಎಂಎಸ್‌ಎಂಇಗಳಿಗೆಂದೇ ಪ್ರತ್ಯೇಕ ಪೇಮೆಂಟ್ ವೇದಿಕೆಯೊಂದನ್ನು ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಉತ್ಪಾದನೆ ಕ್ಷೇತ್ರದಲ್ಲಿನ 19.66 ಮಿಲಿಯನ್‌ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿರುವ 23 ಮಿಲಿಯನ್‌ ಉದ್ದಿಮೆಗಳು ಸೇರಿದಂತೆ ದೇಶದಾದ್ಯಂತ ಸುಮಾರು 63.38 ಮಿಲಿಯನ್‌ ಅಸಂಘಟಿತ ಎಂಎಸ್‌ಎಂಇಗಳು ವಿವಿಧ ಬಗೆಯ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಇವೆಲ್ಲವೂ ಒಟ್ಟಾಗಿ 49.77 ಮಿಲಿಯನ್‌ಗೂ ಅಧಿಕ ಮಂದಿಗೆ ಉದ್ಯೋಗ ನೀಡಿವೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ.

ಉದ್ಯೋಗ ಸೃಷ್ಟಿಗೆ ಸಂಪುಟ ಸಮಿತಿ: ದೇಶದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಎಂಎಸ್‌ಎಂಇ ಕ್ಷೇತ್ರ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿರುವುದನ್ನು ಕೇಂದ್ರ ಸರ್ಕಾರ ಮನಗಂಡಿದೆ. ಹಾಗೇ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಸಚಿವರು ಹೇಳಿದ್ದಾರೆ. ಇದರೊಂದಿಗೆ ಹೊಸ ಉದ್ಯೋಗಗಳ ಸೃಷ್ಟಿ ಮತ್ತು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಎರಡು ಸಂಪುಟ ಸಮಿತಿಗಳನ್ನು ರಚಿಸುವುದಾಗಿ ಅವರು ತಿಳಿಸಿದ್ದಾರೆ.

ಖಾದಿಗೆ ಇ-ಕಾಮರ್ಸ್‌
ಸುಯೋಗ ದೇಶದ ಖಾದಿ ಮತ್ತು ಗ್ರಾಮೋದ್ಯೋಗ, ಗ್ರಾಮೀಣ ಗುಡಿ ಕೈಗಾರಿಕೆ ಮತ್ತು ಎಂಎಸ್‌ಎಂಇಗಳಲ್ಲಿ ಸಿದ್ಧವಾಗುವ ವಸ್ತು, ಉತ್ಪನ್ನಗಳಿಗೆ “ಅಮೆಜಾನ್‌, ಅಲಿಬಾಬಾ’ ರೀತಿಯ ಇ-ಕಾಮರ್ಸ್‌ ಮಾರುಕಟ್ಟೆ ಒದಗಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಒಂದು ಸುಸಜ್ಜಿತ ಇ-ಕಾಮರ್ಸ್‌ ವೆಬ್‌ ಪೋರ್ಟಲ್‌ ಅನ್ನು ಆರಂಭಿಸಲಿದೆ ಎಂದು ಎಂಎಸ್‌ಎಂಇ ಸಚಿವ ನಿಥಿನ್ ಗಡ್ಕರಿ ಬಜೆಟ್‌ ಮುನ್ನಾ ದಿನ ಲೋಕಸಭೆಗೆ ಮಾಹಿತಿ ನೀಡಿದ್ದರು. ಅದೇ ಅಂಶ ಬಜೆಟ್‌ ಭಾಷಣದಲ್ಲಿ ಪ್ರತಿಧ್ವನಿಸಿದೆ.

ಕರ್ಮ ಯೋಗಿಗೆ
ಮಾನಧನ್‌ ಪಿಂಚಣಿ 2016ರ ನವೆಂಬರ್‌ನಲ್ಲಿ ದೊಡ್ಡ ಮೌಲ್ಯದ ನೋಟುಗಳು ಅಮಾನ್ಯಗೊಂಡ ನಂತರ ಹಾಗೂ 2017ರ ಜುಲೈನಲ್ಲಿ ಜಿಎಸ್‌ಟಿ ಪರಿಚಯಿಸಿದ ಬಳಿಕ ದೇಶದ ಕೋಟ್ಯಂತರ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸಿ, ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಅವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ವಾರ್ಷಿಕ 1.5 ಕೋಟಿ ರೂ.ಗಿಂತಲೂ ಕಡಿಮೆ ಮೊತ್ತದ ವಹಿವಾಟು ನಡೆಸುವ 3 ಕೋಟಿಗಿಂತಲೂ ಅಧಿಕ ರೀಟೇಲ್‌ ವರ್ತಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ “ಪ್ರಧಾನಮಂತ್ರಿ ಕರ್ಮ ಯೋಗಿ ಮಾನಧನ್‌ ಯೋಜನೆ’ಯನ್ನು ಪರಿಚಯಿಸಲಾಗಿದೆ.ಆಧಾರ್‌ ಮತ್ತು ಬ್ಯಾಂಕ್‌ ಖಾತೆ ವಿವರಗಳನ್ನು ನೀಡುವ ಮೂಲಕ ಅತ್ಯಂತ ಸುಲಭವಾಗಿ ಈ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. 18ರಿಂದ 40 ವರ್ಷದೊಳಗಿನ ರೀಟೇಲ್‌ ಮತ್ತು ಸರ್ಣಣ ವ್ಯಾಪಾರಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next