Advertisement

ಅಲೆದಾಟ ತಪ್ಪಿಸಲು ಏಕಗವಾಕ್ಷಿ ಯೋಜನೆ

12:04 PM Nov 30, 2018 | Team Udayavani |

ಮೈಸೂರು: ನಗರಾಭಿವೃದ್ಧಿ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಬಡಾವಣೆ ರಚನೆಯ ನಕ್ಷೆ ಅನುಮೋದನೆಗೆ ಏಕಗವಾಕ್ಷಿ ಯೋಜನೆ ಜಾರಿಗೆ ತರುತ್ತಿರುವುದಾಗಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಕಟ್ಟಡ ನಿರ್ಮಾಣ ಮಾಡುವವರು, ಬಡಾವಣೆ ರಚನೆ ಮಾಡುವವರು ದಾಖಲಾತಿಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯಬೇಕಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಹಾಕಲು ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದಾಗ ದಾಖಲಾತಿಗಳೆಲ್ಲಾ ಸರಿಇದ್ದರೆ ಸ್ಥಳದಲ್ಲೇ ಸ್ವೀಕೃತಿ ಪತ್ರ ದೊರೆಯುತ್ತದೆ.

ಈ ಹಿಂದೆ ಒಂದು ಅರ್ಜಿಗೆ 14 ಕಡೆಗಳಲ್ಲಿ ನಿರಾಕ್ಷೇಪಣಾ ಪತ್ರ ತರಬೇಕಿತ್ತು. ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡುವುದೂ ವಿಳಂಬವಾಗುತ್ತಿತ್ತು. ಹೊಸ ಪದ್ಧತಿಯಲ್ಲಿ ಸ್ಥಳ ಪರಿಶೀಲನೆಗೆ ಎಂಜಿನಿಯರ್‌ ಯಾವಾಗ ಬರುತ್ತಾರೆ ಎಂಬ ಸಂದೇಶ ಅರ್ಜಿದಾರರ ಮೊಬೈಲ್‌ಗೆ ರವಾನೆಯಾಗಲಿದೆ. ಇದರಿಂದ ಹಿಂದಿನಂತೆ ಎಂಜಿನಿಯರ್‌ಗಳು ಕಚೇರಿಯಲ್ಲೇ ಕುಳಿತು ನಕ್ಷೆ ಅನುಮೋದಿಸುವುದು ತಪ್ಪುತ್ತದೆ.

ಎಲ್ಲವೂ ಡಿಜಿಟಲೀಕರಣವಾಗುವುದರಿಂದ ಎಂಜಿನಿಯರ್‌ ಸ್ಥಳ ಪರಿಶೀಲನೆ ಮಾಡುವುದನ್ನು ತಪ್ಪಿಸಲಾಗುವುದಿಲ್ಲ ಎಂದರು. ಯೋಜನೆಯ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದು ಶೀಘ್ರ ಜಾರಿಗೆ ತರುವುದಾಗಿ ಹೇಳಿದರು.

ಸ್ವಯಂ ಪರವಾನಗಿ: ಈ ಯೋಜನೆಯಡಿ 30-40 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವವರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಸ್ವಯಂ ಪರವಾನಗಿ ಪಡೆದುಕೊಳ್ಳಬಹುದು. ನಗರಪಾಲಿಕೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಕಟ್ಟಡ ನಿರ್ಮಾಣ ಪರವಾನಗಿ ಕೊಡುವಾಗಲೇ ನಲ್ಲಿ ಮತ್ತು ಒಳಚರಂಡಿ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

Advertisement

ನಿಯಮ ಜಾರಿ: ಮೊಬೈಲ್‌ ಸ್ಥಾವರಗಳ ನಿರ್ಮಾಣ ಸಂಬಂಧ ರಾಜ್ಯದಲ್ಲಿ ಸ್ಪಷ್ಟ ನೀತಿ ಇಲ್ಲದ್ದರಿಂದ ಎಲ್ಲೆಂದರಲ್ಲಿ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಅಂದಾಜಿನ ಪ್ರಕಾರ ಬೆಂಗಳೂರು ನಗರ ಒಂದರಲ್ಲೇ 10 ಸಾವಿರ ಮೊಬೈಲ್‌ ಟವರ್‌, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ 26 ಸಾವಿರ ಟವರ್‌ಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ಇದು ನಿಖರವಲ್ಲ. ಇದಕ್ಕಾಗಿ ಸ್ಪಷ್ಟ ನೀತಿ ಜಾರಿಗೆ ತರಲಾಗುತ್ತಿದೆ. 

ಮೊಬೈಲ್‌ ಟವರ್‌ ಸ್ಥಾಪಿಸುವವರು, ಸಂಚಾರಿ ಟವರ್‌ಗಳವರೂ ಕೂಡ ಸಂಬಂಧಿಸಿದ ಸ್ಥಳೀಯ ಸಂಸ್ಥೆಯಲ್ಲಿ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಕಟ್ಟಡಗಳ ಮೇಲೆ ಮೊಬೈಲ್‌ ಸ್ಥಾಪಿಸುವ ಸಂದರ್ಭದಲ್ಲಿ ಆ ಕಟ್ಟಡದ ಸಾಮರ್ಥ್ಯದ ಬಗ್ಗೆ ಎಂಜಿನಿಯರ್‌ರಿಂದ ನಿರಾಕ್ಷೇಪಣಾ ಪತ್ರ ತರಬೇಕು. ಶಾಲೆ, ದೇವಸ್ಥಾನ, ಆಸ್ಪತ್ರೆಗಳ ಸುತ್ತಲಿನ 50 ಮೀಟರ್‌ ವ್ಯಾಪ್ತಿಯಲ್ಲಿ ಟವರ್‌ ಸ್ಥಾಪಿಸುವಂತಿಲ್ಲ. ಜೊತೆಗೆ ಶಬ್ದರಹಿತ ಜನರೇಟರ್‌ ಅಳವಡಿಸಬೇಕು ಎಂದರು.

3 ತಿಂಗಳೊಳಗೆ ನಿಯಮಾವಳಿ: ಈ ನಿಯಮ ಜಾರಿ ಸಂಬಂಧ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ, ರಾಜ್ಯಮಟ್ಟದಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಗಮನಹರಿಸಲಿದೆ. ಈಗಾಗಲೇ ಟವರ್‌ ಸ್ಥಾಪಿಸಿರುವವರು ಮೂರು ತಿಂಗಳೊಳಗೆ ನಿಯಮಾವಳಿಯನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಟವರ್‌ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next