Advertisement

ಶಾಲೆಗಳಿಗೆ ಇನ್ನೂ ಬಂದಿಲ್ಲ ಸಮವಸ್ತ್ರ

02:40 AM Jul 07, 2018 | Team Udayavani |

ಸುಬ್ರಹ್ಮಣ್ಯ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಬಹುತೇಕ ಪುಸ್ತಕ, ಬಿಸಿಯೂಟ, ಸಮವಸ್ತ್ರ, ಸೈಕಲ್‌ ಮೊಟ್ಟೆ ಇತ್ಯಾದಿ ಸವಲತ್ತು ನೀಡುತ್ತಿದೆ. ಈ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಇದುವರೆಗೆ ಸಮವಸ್ತ್ರ ಶಾಲೆಗಳಿಗೆ ತಲುಪಿಲ್ಲ. ಜತೆಗೆ ಶಿಕ್ಷಕರ ನೇಮಕ, ಭರ್ತಿ ಕಾರ್ಯವೂ ಪೂರ್ಣವಾಗಿಲ್ಲ. ಮೂಲ ಸೌಕರ್ಯ ಒದಗಿಸದ ಕಾರಣ ಕನ್ನಡ ಶಾಲೆಗಳ ಉಳಿವಿನ ಕುರಿತು ಚಿಂತೆ ಮೂಡಲಾರಂಬಿಸಿದೆ.

Advertisement

ಸುಳ್ಯ ತಾಲೂಕಿನ 140 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 564 ಶಿಕ್ಷಕರ ಅಗತ್ಯವಿದೆ. ಈಗ 123 ಶಿಕ್ಷಕರ ಕೊರತೆ ಇದೆ. ಇದನ್ನು ಭರ್ತಿಗೊಳಿಸಲು ಶಿಕ್ಷಣಾಧಿಕಾರಿಗಳು ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ಪೂರ್ಣವಾಗಿಲ್ಲ. ಎಂಟು ಕಿ.ಪ್ರಾ. ಶಾಲೆಗಳಲ್ಲಿ  ಶಿಕ್ಷಕರೇ ಇಲ್ಲ. ಇಂಥ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಬೇಕಾಗಿದೆ.

ಶಿಕ್ಷಕರಿಲ್ಲದ ಶಾಲೆಗಳು
ಇರುವ 140 ಶಾಲೆಗಳ ಪೈಕಿ 66 ಕಿ.ಪ್ರಾ. ಶಾಲೆಗಳು. ಹೇಮಳ, ಕಟ್ಟಗೋವಿಂದನಗರ, ಕಮಿಲ, ಕರಂಗಲ್ಲು, ಮೈತ್ತಡ್ಕ ಮುಗೇರು, ಪೈಕ, ರಂಗತ್ತಮಲೆ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ರಂಗತ್ತಮಲೆ, ಭೂತಕಲ್ಲು ಹಾಗೂ ಕುಕ್ಕೇಟಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಬಾಗಿಲು ಮುಚ್ಚಿವೆ. ಕೆಮನಹಳ್ಳಿ ಶಾಲೆಯನ್ನು ಕದಿಕಡ್ಕದ ಜತೆ ವಿಲೀನಗೊಳಿಸಲಾಗಿದೆ. ಬೆಳ್ಳಾರೆ ಶಾಲೆಯಲ್ಲಿ ಅತೀ ಹೆಚ್ಚು 359 ವಿದ್ಯಾರ್ಥಿಗಳಿದ್ದಾರೆ. 217 ಮಕ್ಕಳಿರುವ ಗುತ್ತಿಗಾರು ಎರಡನೇ ಅತಿದೊಡ್ಡ ಶಾಲೆ. ಇಲ್ಲಿ ನಾಲ್ವರು ಶಿಕ್ಷಕರು ಮಾತ್ರ ಕರ್ತವ್ಯದಲ್ಲಿದ್ದಾರೆ. ಕೇರ್ಪಳ ಶಾಲೆಯಲ್ಲಿ 23 ಮಕ್ಕಳಿದ್ದು, ಒಬ್ಬರೇ ಶಿಕ್ಷಕರು ನಿಭಾಯಿಸಬೇಕಾಗಿದೆ.

14 ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ನೂರಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳು 20 ಮಾತ್ರ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಆಗಬೇಕು. 8ನೇ  ತನಕ ಇರುವ ಶಾಲೆಗಳಲ್ಲಿ ಇಬ್ಬರೇ ಶಿಕ್ಷಕರೂ ಇದ್ದಾರೆ. ಮಡಪ್ಪಾಡಿ ಶಾಲೆಯಲ್ಲಿ 8 ತರಗತಿಗಳಿದ್ದು, ಇಬ್ಬರೇ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ತಾಲೂಕಿನ ಹಲವು ಶಾಲೆಗಳಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಮುಚ್ಚುವ ಹಂತಕ್ಕೆ ಬಂದಿವೆ. ಅವುಗಳಲ್ಲಿ ದೇವರಹಳ್ಳಿ, ಗಡಿಕಲ್ಲು, ಹಾಡಿಕಲ್ಲು, ಹಾಸನಡ್ಕ, ಕೆಮನಹಳ್ಳಿ, ಮೈತ್ತಡ್ಕ, ವಾಲ್ತಾಜೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದು, ಮುಚ್ಚುವ ಹಂತಕ್ಕೆ ತಲುಪಿವೆ. ಹಿ.ಪ್ರಾ. ಶಾಲೆಗಳ ಪೈಕಿ ಅಡ್ತಳೆಯಲ್ಲಿ 64 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು, ಬಾಳುಗೋಡಿನಲ್ಲಿ 75ಕ್ಕೆ 3, ಆಲೆಟ್ಟಿಯಲ್ಲಿ 110ಕ್ಕೆ 3, ಕಂದ್ರಪ್ಪಾಡಿಯಲ್ಲಿ 50ಕ್ಕೆ 2, ಮುಕ್ಕೂರಿನಲ್ಲಿ 48ಕ್ಕೆ 2, ಪೈಲಾರಿನಲ್ಲಿ 40ಕ್ಕೆ 2, ಎಣ್ಮೂರಿನಲ್ಲಿ 107ಕ್ಕೆ 3, ಎಡಮಂಗಲದಲ್ಲಿ 94ಕ್ಕೆ 3 ಶಿಕ್ಷಕರಿದ್ದಾರೆ. ಅನೇಕ ಕಡೆಗಳಲ್ಲಿ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಸ್ಥಿತಿ ಅಧೋಗತಿಯಲ್ಲಿದೆ.

ಹೆಚ್ಚುವರಿ ಹೊಣೆ
ಹೆಚ್ಚುವರಿಯಾಗಿ ಕಚೇರಿ ಕೆಲಸ, ಬಿಸಿಯೂಟ ಲೆಕ್ಕಪತ್ರ ನಿರ್ವಹಣೆ ಮೊದಲಾದ ಹೊಣೆಗಳನ್ನು ನಿರ್ವಹಿಸುತ್ತ ಶಾಲೆಯಿಂದ ಹೊರಗೆ ಹೆಚ್ಚು ಓಡಾಡುವ ಸ್ಥಿತಿ ಶಿಕ್ಷಕರಿಗಿದೆ. ಸರಕಾರ ಶಾಲೆಗಳನ್ನು ಉಳಿಸುವುದು ಸದ್ಯದ ಸ್ಥಿತಿಯಲ್ಲಿ ತೀರಾ ಕಷ್ಟ ಎಂಬುದು ಆತಂಕಪಡುವ ಸಂಗತಿ.

Advertisement

ಸುಧಾರಣೆ ಆಗಲಿದೆ
ಸಮವಸ್ತ್ರ ಇನ್ನೂ ಬಂದಿಲ್ಲ. ಶೀಘ್ರ ತಲುಪುವ ವಿಶ್ವಾಸವಿದೆ. ಅತಿಥಿ ಶಿಕ್ಷಕರ ನೇಮಕಾತಿಗೆ ಆಯಾ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಸಮಸ್ಯೆ ಸುಧಾರಿಸಲಿದೆ.
– ಲಿಂಗರಾಜೇ ಅರಸ್‌,  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ

— ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next