Advertisement

ತಿಂಗಳು ಕಳೆದರೂ ಸಿಗದ ಸಮವಸ್ತ್ರ

02:01 AM Dec 01, 2021 | Team Udayavani |

ಉಡುಪಿ: ಶಾಲೆಗಳಲ್ಲಿ ಭೌತಿಕ ತರಗತಿ ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಆಗಿಲ್ಲ.

Advertisement

ಸರಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರಕಾರದ ಸರ್ವಶಿಕ್ಷಾ ಅಭಿಯಾನ (ಸಮಗ್ರ ಶಿಕ್ಷಣ)ದಿಂದ ತಲಾ ಒಂದು ಜತೆ ಸಮವಸ್ತ್ರವನ್ನು ಪ್ರತೀ ವರ್ಷ ನೀಡಲಾಗುತ್ತದೆ.

ಪ್ರಸಕ್ತ ವರ್ಷ ಪೂರ್ವ ಪ್ರಾಥಮಿಕ ತರಗತಿಯಿಂದ ಪಿಯುಸಿ ಸಹಿತ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳಿಗೂ ಭೌತಿಕ ತರಗತಿ ಆರಂಭವಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಹಿಂದಿನ ವರ್ಷದ ಸಮವಸ್ತ್ರ ಧರಿಸಿ, ಅದಿಲ್ಲದಿದ್ದರೆ ಸಾದಾ ದಿರಿಸಿನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧಭಾಗ ಪೂರ್ಣ ವಾಗಿದೆ. ಉಳಿದ ಅರ್ಧಭಾಗ ವಾದರೂ ವಿದ್ಯಾರ್ಥಿಗಳು ಹೊಸ ಸಮವಸ್ತ್ರ ದಲ್ಲಿ ಶಾಲೆಗೆ ಹೋಗಲು ಸರಕಾರ ಅವಕಾಶ ಮಾಡಿಕೊಡಬೇಕು ಎಂಬುದು ಹೆತ್ತವರ ಆಗ್ರಹ.

ದಕ್ಷಿಣ ಕನ್ನಡದಲ್ಲಿ 1ರಿಂದ 10ನೇ ತರಗತಿಯಲ್ಲಿ 1,67,744 ಹುಡುಗರು, 1,54,920 ಹುಡುಗಿ ಯರು ಸೇರಿ 3,22,664 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 1.20 ಲಕ್ಷ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಮವಸ್ತ್ರ ನೀಡಲಾಗುತ್ತದೆ. ಉಡುಪಿ ಜಿಲ್ಲೆಯ 1ರಿಂದ 10ನೇ ತರಗತಿಯಲ್ಲಿ 83,391 ಹುಡುಗರು, 76,791 ಹುಡುಗಿಯರು ಸೇರಿ 1,60,182 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸರಕಾರಿ, ಅನುದಾನಿತ ಶಾಲೆಯ ಸುಮಾರು 80 ಸಾವಿರ ಮಂದಿಗೆ ಸಮವಸ್ತ್ರ ನೀಡಲಾಗುತ್ತದೆ.

ಇದನ್ನೂ ಓದಿ:ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

Advertisement

ಸಮವಸ್ತ್ರಕ್ಕೆ ಸಂಬಂಧಿಸಿ ರಾಜ್ಯ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಂಡಿರುವುದರಿಂದ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಕ್ಕೂ ಏಕಕಾಲದಲ್ಲಿ ಪೂರೈಕೆ ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶೂ, ಸಾಕ್ಸ್‌ ಅನುಮಾನ
ಪ್ರತೀ ವರ್ಷ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರದ ಜತೆಗೆ ಶೂ, ಸಾಕ್ಸ್‌ ಕೂಡ ವಿತರಣೆ ಮಾಡ ಲಾಗುತ್ತಿತ್ತು. ಇವುಗಳ ಖರೀದಿ ಪ್ರಕ್ರಿಯೆ ಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ ಮೂಲಕ ಮಾಡ ಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಿಂದ ಶಾಲೆಯ ಜಂಟಿ ಖಾತೆಗೆ ಅನುದಾನ ನೀಡಲಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಶೂ, ಸಾಕ್ಸ್‌ ಖರೀದಿಗೆ ಅನುದಾನ ಬಂದಿಲ್ಲ. ಶೂ ಬದಲಿಗೆ ಚಪ್ಪಲಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ಯಾವುದೇ ಸೂಚನೆ ಬಂದಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ ಶಾಲೆಯ ಸುಮಾರು 80 ಸಾವಿರ, ದ.ಕ. ಜಿಲ್ಲೆಯ ಸುಮಾರು 1.20 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಕಾರದಿಂದ ನೀಡಲಾಗುತ್ತದೆ. ಸಮವಸ್ತ್ರ ಪೂರೈಕೆಯಾದ ಕೂಡಲೇ ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.
-ಮಲ್ಲೇಸ್ವಾಮಿ, ಎನ್‌.ಎಚ್‌. ನಾಗೂರ
ಶಿಕ್ಷಣ ಇಲಾಖೆ ಉಪನಿರ್ದೇಶಕರು, ದ.ಕ., ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next