ಉಡುಪಿ: ಸರಕಾರಿ ಶಾಲೆಗಳ ಮಕ್ಕಳಿಗೆ ಸಿಹಿ ಸುದ್ದಿ. ಪ್ರತೀ ವರ್ಷದಂತೆ ಶಾಲಾ ಸಮವಸ್ತ್ರಕ್ಕಾಗಿ ದಸರಾ ರಜೆಯವರೆಗೂ ಚಾತಕ ಪಕ್ಷಿಯಂತೆ ಕಾಯಬೇಕಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷ(2023-24)ದ ಆರಂಭಕ್ಕೂ ಮೊದಲೇ ಸಮವಸ್ತ್ರ ಮಕ್ಕಳ ಕೈಸೇರಲಿದೆ. ಜತೆಗೆ ಹೊಸ ಪಠ್ಯಪುಸ್ತಕವೂ ಸಿಗಲಿದೆ.
ಸಾಮಾನ್ಯವಾಗಿ ಶೈಕ್ಷಣಿಕ ಚಟುವಟಿಕೆ ಆರಂಭವಾದರೂ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿರುವುದಿಲ್ಲ. ಈ ಸಮಸ್ಯೆಗೆ ಕಡಿವಾಣ ಹಾಕಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಸರಕಾರಿ ಶಾಲಾ ಮಕ್ಕಳಿಗೆ ಬೇಕಾದ ಸಮವಸ್ತ್ರದ ಕಾರ್ಯಾದೇಶ ನೀಡಿದ್ದು, ಕೆಲವು ಕಡೆ ಪೂರೈಕೆ ಪ್ರಕ್ರಿಯೆಯೂ ಆರಂಭವಾಗಿದೆ.
ರಾಜ್ಯಾದ್ಯಂತ 1ರಿಂದ 10ನೇ ತರಗತಿಯಲ್ಲಿ 21,99,735 ಬಾಲಕರು, 22,79,207 ಬಾಲಕಿಯರು ಸೇರಿದಂತೆ 44,78,942 ಮಕ್ಕಳು ಸರಕಾರಿ ಶಾಲೆಗಳಲ್ಲಿದ್ದಾರೆ. ಕಲಬುರಗಿ ವಿಭಾಗದ ಮಕ್ಕಳಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಬೆಳಗಾವಿ ವಿಭಾಗದ ಮಕ್ಕಳಿಗೆ ಕರ್ನಾಟಕ ಜವುಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಕಂಚನ್ ಇಂಡಿಯಾ ಲಿ., ಮೈಸೂರು, ಬೆಂಗಳೂರು ವಿಭಾಗದ ಮಕ್ಕಳಿಗೆ ಕಂಚನ್ ಇಂಡಿಯಾ ಲಿ. ಹಾಗೂ ಎಲ್ಲ ವಿಭಾಗದ 8ರಿಂದ 10ನೇ ತರಗತಿ ಹೆಣ್ಣು ಮಕ್ಕಳಿಗೆ ಮಫತ್ಲಾಲ್ ಇಂಡಸ್ಟ್ರೀಸ್‌ನಿಂದ ಸಮವಸ್ತ್ರ ಪೂರೈಕೆಯಾಗಲಿದೆ. ಗುತ್ತಿಗೆ ಪಡೆದ ಸಂಸ್ಥೆಗಳು ಎಲ್ಲ ಜಿಲ್ಲೆಗಳ ಬಿಇಒ ಕಚೇರಿಗಳಿಗೆ ಪೂರೈಕೆ ಮಾಡಲಿವೆ. ಅಲ್ಲಿಂದ ಶಾಲೆಗೆ ಸಮವಸ್ತ್ರ ಹೋಗಲಿದೆ.
ಬಟ್ಟೆ ಉಚಿತ, ಹೊಲಿಗೆಗೆ ಶುಲ್ಕ
ಸಮವಸ್ತ್ರದ ಬಟ್ಟೆಯನ್ನು ಸರಕಾರದಿಂದ ಉಚಿತವಾಗಿ ನೀಡಲಾಗುತ್ತದೆ. ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರು ಭರಿಸಬೇಕು. ಏಕರೂಪತೆಯ ದೃಷ್ಟಿಯಿಂದ ಎಸ್‌ಡಿಎಂಸಿ ಮೂಲಕ ಹೊಲಿಗೆ ಕಾರ್ಯದ ನಿರ್ವಹಣೆ ಮಾಡಲಾಗುತ್ತದೆ.
Related Articles
ಸಮವಸ್ತ್ರ ಹೇಗಿರಲಿದೆ?
1ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ/ಹಾಫ್ಪ್ಯಾಂಟ್ ಮತ್ತು ಶರ್ಟ್, ಬಾಲಕಿಯರಿಗೆ ಸ್ಕರ್ಟ್ ಮತ್ತು ಶರ್ಟ್, 8ರಿಂದ 10ನೇ ತರಗತಿ ಬಾಲಕರಿಗೆ ಫ್ಯಾಂಟ್ ಮತ್ತು ಶರ್ಟ್, ಬಾಲಕಿಯರಿಗೆ ಚೂಡಿದಾರ್ (ಟಾಪ್, ಬಾಟಮ್ ಮತ್ತು ದುಪಟ್ಟಾಕ್ಕೆ ಪ್ರತ್ಯೇಕ ಬಟ್ಟೆ ಇರಲಿದೆ)ಗೆ ಬೇಕಾದಷ್ಟು ಬಟ್ಟೆ ನೀಡಲಾಗಿದೆ. ಶರ್ಟ್, ಪ್ಯಾಂಟ್, ಹಾಫ್ಪ್ಯಾಂಟ್, ಸ್ಕರ್ಟ್, ಚೂಡಿದಾರ್‌ಗೆ ಎಷ್ಟು ಬಟ್ಟೆ ನೀಡಬೇಕು ಎಂಬುದನ್ನು ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ.
ಸಮವಸ್ತ್ರದ ಬಣ್ಣ
ಗಂಡು/ಹೆಣ್ಣು ಮಕ್ಕಳ ಮೇಲಂಗಿ ಲೈಟ್ ಬ್ಲೂ, ಗಂಡು ಮಕ್ಕಳ ಹಾಫ್ ಪ್ಯಾಂಟ್/ ಪ್ಯಾಂಟ್ ನೇವಿ ಬ್ಲೂ, ಹೆಣ್ಣು ಮಕ್ಕಳ ಸ್ಕರ್ಟ್ ನೇವಿ ಬ್ಲೂ, ಚೂಡಿದಾರ ಟಾಪ್ ಹಸುರು, ಕೆಂಪು, ಬಿಳಿ, ಕಪ್ಪು, ಹಳದಿ ಮಿಶ್ರಿತ ಚಕ್ಸ್ ಬಟ್ಟೆ, ಚೂಡಿದಾರ್ ಬಾಟಮ್ ಹಾಗೂ ದುಪಟ್ಟಾ ಹಸುರು ಬಣ್ಣದಿಂದ ಕೂಡಿರಲಿದೆ.
ಗುಣಮಟ್ಟ ಪರೀಕ್ಷೆ
ಮಕ್ಕಳಿಗೆ ಗುಣಮಟ್ಟದ ಸಮವಸ್ತ್ರ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲನೆಗೆ ಪ್ರತೀ ತಾಲೂಕಿನಿಂದಲೂ ಎಲ್ಲ ಮಾದರಿಯ ಒಂದು ಸೆಟ್ ಬಟ್ಟೆಯನ್ನು ಕೇಂದ್ರ ಕಚೇರಿಗೆ ಪಡೆಯಲಾಗುತ್ತದೆ. ಕೇಂದ್ರ ಕಚೇರಿಯಲ್ಲೇ ಗುಣಮಟ್ಟ ಪರಿಶೀಲಿಸಿ, ಕಳಪೆ ಕಂಡು ಬಂದಲ್ಲಿ ನಿರ್ದಿಷ್ಟ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ. ಅಧಿಕೃತ ಮಾಹಿತಿ ಇಲ್ಲದೆ ಹಿಂದಿನ ದಾಸ್ತಾನುಗಳನ್ನು ವಿತರಿಸುವಂತಿಲ್ಲ ಎಂಬ ನಿರ್ದೇಶನವನ್ನು ಇಲಾಖೆಯಿಂದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ನೀಡಲಾಗಿದೆ.
2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯಪುಸ್ತಕ ಈಗಾಗಲೇ ಶಾಲೆ ತಲುಪಿದೆ. ಕೆಲವೊಂದು ಶಾಲೆಗಳಲ್ಲಿ ಪುಸ್ತಕ ವಿತರಣೆ ಪ್ರಕ್ರಿಯೆಯೂ ಆರಂಭವಾಗಿದೆ. ಸಮವಸ್ತ್ರ ವಿತರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಎಲ್ಲ ಮಕ್ಕಳಿಗೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಮವಸ್ತ್ರ, ಪಠ್ಯಪುಸ್ತಕ ಸಿಗಲಿದೆ.
– ಗಣಪತಿ ಕೆ., ಡಿಡಿಪಿಐ ಉಡುಪಿ
– ರಾಜು ಖಾರ್ವಿ ಕೊಡೇರಿ