ಬೆಂಗಳೂರು: ಆರ್‌ಟಿಇ ಕಾಯ್ದೆಯ ಸೆಕ್ಷನ್ 3ರ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಗಳ 1ರಿಂದ 8ನೇ ತರಗತಿ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಹೊಲಿಸಿದ ಸಮವಸ್ತ್ರ ಹಾಗೂ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಒದಗಿಸಲು ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಕೊಪ್ಪಳ ಜಿಲ್ಲೆ ಕಿನ್ನಾಳದ ದೇವಪ್ಪ ಬಸಪ್ಪ ಹರಿಜನ ಎಂಬುವರ 8 ವರ್ಷದ ಪುತ್ರ ಮಂಜುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಶಾಲಾ ಸಮವಸ್ತ್ರದಂತಹ ಲಕ್ಷಾಂತರ ವಿದ್ಯಾರ್ಥಿ ಗಳಿಗೆ ಸಂಬಂಧಿಸಿದ ಅತ್ಯಂತ ಸಕಾಲಿಕ ವಿಷಯ ವನ್ನು ಕೋರ್ಟ್ ಮುಂದೆ ಎತ್ತಿದ ಅರ್ಜಿದಾರ ವಿದ್ಯಾರ್ಥಿ ಯ ಕಾಳಜಿ ಬಗ್ಗೆ ಕೋರ್ಟ್ ಪ್ರಶಂಸೆ ವ್ಯಕ್ತಪಡಿಸಿತು. ಅರ್ಜಿದಾರರ ಮನವಿ ಯಂತೆ ವಿದ್ಯಾರ್ಥಿಗೆ ಎರಡನೇ ಜೊತೆ ಹೊಲಿದ ಸಮವಸ್ತ್ರ, ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್‌ಗಳನ್ನು ಎರಡು ವಾರಗಳಲ್ಲಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.
ಸರ್ಕಾರ ಪ್ರಸಕ್ತ ವರ್ಷ ಒಂದು ಜೊತೆ ಸಮವಸ್ತ್ರ ಒದಗಿಸುವುದಾಗಿ ಹೇಳುತ್ತಿ ರುವ ಆಲೋಚನೆ ಅರ್ಥವಾಗುತ್ತಿಲ್ಲ. 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಸಂವಿಧಾನದ ಆರ್‌ಟಿಐ ಕಾಯ್ದೆ ಹೇಳುತ್ತದೆ ಎಂದು ತಿಳಿಸಿತು.
ಸಾಮಾನ್ಯ ವಿಚಾರಕ್ಕೆ ಹೈಕೋರ್ಟ್ ಮೆಟ್ಟಿಲತ್ತಬೇಕಾ?: ಸರ್ಕಾರವೇ ಕೊಟ್ಟಿರುವ ಮಾಹಿತಿಯಂತೆ ಅಂದಾಜು 38 ಲಕ್ಷ ಮಕ್ಕಳು ಆರ್‌ಟಿಇ ವ್ಯಾಪ್ತಿಗೆ ಬರುತ್ತಾರೆ. ಈ ವಿದ್ಯಾರ್ಥಿಗಳು ವಾರದ ಐದು ಅಥವಾ ಆರು ದಿನಗಳಲ್ಲಿ ಪ್ರತಿ ದಿನ ಒಂದೇ ಜೊತೆ ಸಮವಸ್ತ್ರ ಧರಿಸಿ ಶಾಲೆಗೆ ಬರಲಾಗದು. ಇದು ಕಾಯ್ದೆ ಉಲ್ಲಂಘನೆ ಜತೆಗೆ ಶುಚಿತ್ವದ ಪ್ರಶ್ನೆಯೂ ಆಗಿದೆ. ಇಂತಹ ಸಾಮಾನ್ಯ ವಿಚಾರಗಳಿಗೂ ಜನ ಹೈಕೋರ್ಟ್‌ಗೆ ಬರಬೇಕಾ ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿತು.
ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಗೆ ಸೂಚನೆ
ಬೆಂಗಳೂರು: ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸರ್ಕಾರಿ ಶಾಲೆಗಳ 1- 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ 2019- 20ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆ ಯಡಿ ಉಚಿತ ಸಮವಸ್ತ್ರ ಪೂರೈಸಲು ಸರ್ಕಾರ ಆದೇಶ ಹೊರಡಿದೆ. ವಿದ್ಯಾವಿಕಾಸ ಯೋಜನೆಯಡಿ ಉಚಿತವಾಗಿ 87,903 ಜೊತೆ ಸಮವಸ್ತ್ರವನ್ನು ನಿಯಮಾನುಸಾರ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸರ್ಕಾರ ಅನುಮತಿ ನೀಡಿದೆ. ಸಮವಸ್ತ್ರ ಸರಬರಾಜು ದಾರರಾದ ಕೆಎಸ್‌ಟಿಐಡಿಸಿಯಿಂದ ಖರೀದಿಸಲು ಸೂಚಿಸಿದೆ.
ಸಮವಸ್ತ್ರಕ್ಕೆ ತಗಲುವ ವೆಚ್ಚವನ್ನು ಪ್ರಸಕ್ತ ಸಾಲಿನ ಆಯವ್ಯಯದ ವಿದ್ಯಾವಿಕಾಸ ಯೋಜನೆಯಡಿ ಉಳಿಕೆ ಅನುದಾನದಿಂದ ಭರಿಸಬೇಕು. ಸರಬರಾಜಾದ ಸಮವಸ್ತ್ರಗಳು ನಿಗದಿಪಡಿಸಿರುವ ವೈಶಿಷ್ಟತೆ ಹೊಂದಿರುವುದನ್ನು ಆಯುಕ್ತರು ಖಚಿತಪಡಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸಮವಸ್ತ್ರ ವಿತರಣೆಯ ಭೌತಿಕ ಪ್ರಗತಿಯ ಬಗ್ಗೆ ನಿಗಾ ವಹಿಸಲು ತಿಳಿಸಿದೆ ಮತ್ತು ಇಲಾಖೆಯ ಪ್ರಸ್ತಾವನೆ ಪರಿಶಿಲಿಸಿ ಸರ್ಕಾರ ಈ ಆದೇಶ ನೀಡಿದೆ.