ಉತ್ತರಾಖಂಡ್: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಏಕರೂಪ ನಾಗರಿಕ ಸಂಹಿತೆ ಕುರಿತು ಕರಡು ಸಿದ್ಧಪಡಿಸಲು ನೇಮಕ ಮಾಡಿದ್ದ ಸಮಿತಿ ಶುಕ್ರವಾರ(ಫೆ.02) ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ದಾಖಲೆಯನ್ನು ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Hemant Soren: ಬಂಧನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಹೇಮಂತ್ ಸೊರೇನ್ ಗೆ ಮುಖಭಂಗ
ಯುಸಿಸಿ ಕರಡು ಸಮಿತಿ ಅಧ್ಯಕ್ಷ ಸುಪ್ರೀಂಕೋರ್ಟ್ ನಿವೃತ್ತ ಜಸ್ಟೀಸ್ ರಂಜನಾ ಪ್ರಕಾಶ್ ದೇಸಾಯಿ ಅವರು ಮುಖ್ಯ ಸೇವಕ್ ಸದನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪುಷ್ಕರ್ ಅವರಿಗೆ ಕರಡು ಪ್ರತಿಯ ದಾಖಲೆಯನ್ನು ಹಸ್ತಾಂತರಿಸಿರುವುದಾಗಿ ವರದಿ ವಿವರಿಸಿದೆ.
ಏಕರೂಪ ನಾಗರಿಕ ಸಂಹಿತೆ ಕರಡು ಹಸ್ತಾಂತರ ಹಿನ್ನೆಲೆಯಲ್ಲಿ ಸಿಎಂ ಧಾಮಿ ಅವರ ಅಧಿಕೃತ ನಿವಾಸದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಫೆ.5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ಉತ್ತರಾಖಂಡ್ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಏಕರೂಪ ನಾಗರಿಕ ಸಂಹಿತೆ ನಿರ್ಣಯವನ್ನು ಅಂಗೀಕರಿಸಲು ಸಿದ್ಧತೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಏಕರೂಪ ನಾಗರಿಕ ಸಂಹಿತೆ ಕರಡು ಪ್ರತಿಯನ್ನು ಸಿಎಂ ಪುಷ್ಕರ್ ಸ್ವೀಕರಿಸಿದ್ದು, ಉತ್ತರಾಖಂಡ್ ಸರ್ಕಾರ ಶನಿವಾರ (ಫೆ.03) ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಿದೆ. ಫೆಬ್ರವರಿ 6ರಂದು ವಿಧಾನಸಭೆಯಲ್ಲಿ ಯುಸಿಸಿ ಕರಡನ್ನು ಮಸೂದೆ ರೂಪದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಒಂದು ವೇಳೆ ಇದು ಜಾರಿಗೊಂಡರೆ ಸ್ವಾತಂತ್ರ್ಯ ನಂತರ ಏಕರೂಪ ನಾಗರಿಕ ಸಂಹಿತೆ ಜಾರಿಗೊಂಡ ಮೊದಲ ರಾಜ್ಯ ಉತ್ತರಾಖಂಡ್ ಆಗಲಿದೆ. ಉತ್ತರಾಖಂಡ್ ರಾಜ್ಯದ ಜನರಿಗೆ ಇದೊಂದು ಪ್ರಮುಖವಾದ ದಿನವಾಗಿದೆ. ಏಕಭಾರತ, ಶ್ರೇಷ್ಠ ಭಾರತ ಎಂಬ ಧ್ಯೇಯವನ್ನು ಅರ್ಥ ಮಾಡಿಕೊಳ್ಳಲು ಏಕರೂಪ ನಾಗರಿಕ ಸಂಹಿತೆ ಸಹಾಯವಾಗಲಿದೆ ಎಂದು ಪುಷ್ಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.