Advertisement

Agri: ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್‌ ವ್ಯವಸ್ಥೆ: ಡಾ| ಶಾಲಿನಿ ರಜನೀಶ್‌

12:17 AM Jan 12, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಪ್ರಾಯೋಜಕತ್ವದಲ್ಲಿ ಸ್ಥಾಪನೆಯಾಗಿರುವ ಫ‌ುಡ್‌ ಪಾರ್ಕ್‌ಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು, ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡ್‌ನೊಂದಿಗೆ ಮಾರುಕಟ್ಟೆ ಕಲ್ಪಿಸುವ ಕಾರ್ಯವನ್ನು ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಸಾಧಿಸಬೇಕು ಎಂದು ಅಭಿವೃದ್ಧಿ ಆಯುಕ್ತೆ ಡಾ| ಶಾಲಿನಿ ರಜನೀಶ್‌ ಹೇಳಿದರು.

Advertisement

ವಿಧಾನಸೌಧದಲ್ಲಿ ಗುರುವಾರ ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್‌ ಒದಗಿಸುವ ಕುರಿತು ಆಯೋಜಿಸಲಾಗಿದ್ದ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಹಿರಿಯೂರು, ಬಾಗಲಕೋಟೆ, ಜೇವರ್ಗಿ ಹಾಗೂ ಮಾಲೂರು ತಾಲೂಕುಗಳಲ್ಲಿರುವ ಫ‌ುಡ್‌ ಪಾರ್ಕ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆದ್ಯತೆ ನೀಡಬೇಕು ಎಂದರು.

31 ಜಿಲ್ಲೆಗಳ ಬೆಳೆಗಳು, ಅಗತ್ಯವಿರುವ ತಂತ್ರಜ್ಞಾನ ಆಧರಿಸಿ ಈ ಫ‌ುಡ್‌ ಪಾರ್ಕ್‌ಗಳ ವ್ಯಾಪ್ತಿಯಡಿ ವಿಂಗಡಿಸಬೇಕು. ತ್ವರಿತವಾಗಿ ಹಾಳಾಗುವ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ರೈತರನ್ನು ತೊಡಗಿಸಬೇಕು. ರಫ್ತು ಚಟುವಟಿಕೆಗಳನ್ನು ಉತ್ತೇಜಿಸಿ, ಉದ್ಯೋಗ ಸೃಷ್ಟಿ, ರೈತರ ಆದಾಯ ಹೆಚ್ಚಳಕ್ಕೆ ಸಮಗ್ರ ರೂಪುರೇಷೆಯೊಂದಿಗೆ ಸರಳವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಕೌಶಲ್ಯ ಹೆಚ್ಚಿಸಿ, ಜೀವನಮಟ್ಟ ಸುಧಾರಿಸಿ
ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿಕರ ಮಕ್ಕಳ ಹೊಸ ಪೀಳಿಗೆಗೆ ಕೃಷಿ ಯಂತ್ರೋಪಕರಣಗಳ ಬಳಕೆ, ಸುಸ್ಥಿರ ಕೃಷಿ, ವೈವಿಧ್ಯದ ಉಪಕಸುಬುಗಳ ತರಬೇತಿ ನೀಡಿ, ಕೌಶಲ ಹೆಚ್ಚಿಸಿ ಜೀವನಮಟ್ಟ ಸುಧಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಶುಕುಮಾರ್‌, ಸಹಕಾರ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಸಹಿತ ಕೃಷಿ, ನಬಾರ್ಡ್‌ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next