ಮಡಿಕೇರಿ: ಅರಣ್ಯ ಪ್ರದೇಶಗಳಿಂದ ಆವೃತವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳು ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಹಾವಳಿಗೆ ಸಿಲುಕಿ ನಲುಗುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳ ಕುರಿತು ಚಿಂತನೆ ಒಂದೆಡೆ ನಡೆಯುತ್ತಿದ್ದರೆ, ಮತ್ತೂಂದೆಡೆ ಅರಣ್ಯ ಇಲಾಖೆ ಅದೇ ಹಳೆೆಯ ಕಂದಕಗಳ ನಿರ್ಮಾಣದಲ್ಲಿ ತೊಡಗಿದೆ.
ಕಂದಕಗಳು ಅವೈಜ್ಞಾನಿಕವಾಗಿರುವುದರಿಂದ ನಿಷ್ಪ್ರಯೋಜಕ ಪ್ರಯೋಗದಲ್ಲಿ ಅರಣ್ಯ ಇಲಾಖೆ ಹಣವನ್ನು ಪೋಲು ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅರಣ್ಯ ಪ್ರದೇಶದ ಅಂಚಿನ ಉದ್ದಕ್ಕೂ ಆಳದ ಕಂದಕಗಳನ್ನು ತೋಡಿ, ಕಾಡಾನೆಗಳು ಕಾಡನ್ನು ತೊರೆದು ಗ್ರಾಮೀಣ ಭಾಗಗಳಿಗೆ ಬಾರದಂತೆ ತಡೆಯಬಹುದು. ಇತ್ತೀಚೆಗೆ ಚೆಟ್ಟಳ್ಳಿ ವ್ಯಾಪ್ತಿಯ ಮೀನು ಕೊಲ್ಲಿ ಅರಣ್ಯದ ಅಂಚಿನಲ್ಲಿ ಕಂದಕವನ್ನು ತೋಡಲಾಗಿದೆ. ಆದರೆ ಈ ಕಂದಕಗಳು ಕಾಡಾನೆಗಳ ಸಂಚಾರಕ್ಕೆ ತಡೆಯೊಡ್ಡುವಲ್ಲಿ ವಿಫಲವಾಗಿವೆ.
ಅತ್ಯಂತ ಚಾಣಾಕ್ಷತನ ಮೆರೆಯುವ ಕಾಡಾನೆ ಗಳು ಸೌರಬೇಲಿ ಮೇಲೆ ಮರಗಳನ್ನು ಬೀಳಿಸಿ ಬೇಲಿ ಯನ್ನು ದಾಟಿರುವ ಘಟನೆಗಳು ಸಾಕಷ್ಟು ನಡೆದಿವೆ. ಕಂದಕಗಳ ಬದಿಯ ಮಣ್ಣನ್ನೇ ಗುಂಡಿಗೆ ತಳ್ಳುವ ಮೂಲಕ ಕಂದಕವನ್ನು ಸಲೀಸಾಗಿ ದಾಟಿಬಿಡುವ ವಿದ್ಯೆ ಅವುಗಳಿಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮೀನುಕೊಲ್ಲಿ ಅರಣ್ಯ ಭಾಗದಲ್ಲಿರುವ ಕಂದಕಗಳು ಸಮರ್ಪಕವಾಗಿಲ್ಲ, ಅವುಗಳ ಮೂಲಕ ಕಾಡಾನೆ ಗಳು ಗ್ರಾಮಿಣ ಭಾಗಕ್ಕೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಆ ವಿಭಾಗದ ಗ್ರಾಮಸ್ಥರು.
ಅವೈಜ್ಞಾನಿಕ ಕಂದಕ
ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ಕಂಡಕೆರೆ ವಾಲೂ°ರು ರಸ್ತೆ ಬದಿಯ ಆನೆ ಕಂದಕ ಅವೈಜ್ಞಾನಿಕ ವಾಗಿದೆ ಎನ್ನುವ ಮಾತು ಗ್ರಾಮಸ್ಥರದ್ದು. ಆನೆ ಕಂದಕವನ್ನು ನಿರ್ಮಿಸುವಾಗ ಅಗೆದ ಮಣ್ಣನ್ನು ಅರಣ್ಯದ ಬದಿಗೆ ಹಾಕಬಾರದು. ಹಾಗೆ ಮಣ್ಣು ಹಾಕಿದಲ್ಲಿ ಅದೇ ಮಣ್ಣನ್ನು ಕಂದಕಕ್ಕೆ ತಳ್ಳುವ ಮೂಲಕ ಕಾಡಾನೆಗಳು ಮತ್ತೆ ನಾಡಿಗೆ ಲಗ್ಗೆ ಇಡುತ್ತವೆ.
ಮೀನುಕೊಲ್ಲಿ ಅರಣ್ಯದ ಅಂಚಿನಲ್ಲಿ ಇದೇ ತಪ್ಪು ನಡೆದಿದೆ ಎನ್ನುವ ಗ್ರಾಮಸ್ಥರು, ಅರಣ್ಯ ಭಾಗಕ್ಕೆ ಕಂದಕದ ಮಣ್ಣನ್ನು ಹಾಕಿರುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅರಣ್ಯ ಇಲಾಖೆ ಶೀಘ್ರ ಇತ್ತ ಗಮನ ಹರಿಸಿ ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳುವ ಮೂಲಕ ಕಾಡಾನೆಗಳು ಗ್ರಾಮೀಣ ಭಾಗಕ್ಕೆ ಲಗ್ಗೆ ಇಡದಂತೆ ನೋಡಿಕೊಳ್ಳಬೇಕಾಗಿದೆ. ಅವೈಜ್ಞಾನಿಕ ಕ್ರಮಗಳನ್ನು ಕೈಬಿಟ್ಟು ಹೊಸ ಪ್ರಯೋಗ ಮಾಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.