Advertisement

ಎರಡು ಸ್ಥಾನ ಬಿಟ್ಟು ಕೊಡಲು ಅಸಮಾಧಾನ

01:24 AM May 29, 2019 | mahesh |
ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರದಲ್ಲಿ ಜೆಡಿಎಸ್‌ನಲ್ಲಿ ಅಸಮಾಧಾನ ಉಂಟಾಗಿದೆ. ಸಂಪುಟದಲ್ಲಿ ಜೆಡಿಎಸ್‌ ಕೋಟಾದ ಎರಡು ಸ್ಥಾನಗಳು ಖಾಲಿ ಇವೆ. ಆ ಸ್ಥಾನಗಳು ಅತೃಪ್ತ ಕಾಂಗ್ರೆಸ್‌ ಶಾಸಕರಿಗೆ ನೀಡಲು ಮುಂದಾಗಿರುವುದು ಸರಿಯಲ್ಲ. ಜೆಡಿಎಸ್‌ ಶಾಸಕರಿಗೆ ಅದು ಸಿಗಬೇಕೆಂದು ಕೆಲವು ಶಾಸಕರು ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆ ನಂತರ ಜೆಡಿಎಸ್‌ ನಾಯಕರು ತನ್ನ ಪಾಲಿನ ಎರಡು ಸಚಿವ ಸ್ಥಾನ ತುಂಬುವ ಭರವಸೆ ನೀಡಿದ್ದರು. ಆ ಎರಡೂ ಸ್ಥಾನ ನಮ್ಮ ಪಕ್ಷದವರಿಗೇ ಇರಲಿ. ಅದನ್ನು ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಕೊಡುವುದು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಒತ್ತಡ ಹೇರಲಾಗುತ್ತಿದೆ. ಜೆಡಿಎಸ್‌ನಲ್ಲಿ ಸಂಪುಟಕ್ಕೆ ಸೇರಲು ಎಚ್.ವಿಶ್ವನಾಥ್‌, ಬಸವರಾಜ ಹೊರಟ್ಟಿ, ಎಚ್.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ, ಸತ್ಯನಾರಾಯಣ, ಶ್ರೀನಿವಾಸಗೌಡ, ಅನ್ನದಾನಿ, ಶ್ರೀನಿವಾಸಮೂರ್ತಿ, ಬಿ.ಎಂ.ಫ‌ರೂಕ್‌ ಆಕಾಂಕ್ಷಿಗಳಾಗಿದ್ದಾರೆ. ಎರಡು ಸ್ಥಾನಗಳನ್ನು ಆಕಾಂಕ್ಷಿಗಳ ಪೈಕಿ ಇಬ್ಬರಿಗೆ ಕೊಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು. ಸಂಪುಟ ವಿಸ್ತರಣೆ ಆಗಲಿ, ಸಂಪುಟ ಪುನಾರಚನೆ ಬೇಡ. ಕೆಲವು ಸಚಿವರನ್ನು ಕೈ ಬಿಟ್ಟರೆ ಮತ್ತೆ ಅಸಮಾಧಾನ ಉಂಟಾಗಬಹುದು ಎಂಬ ಅಭಿಪ್ರಾಯವನ್ನು ವಿಶ್ವನಾಥ್‌ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಕುಮಾರಸ್ವಾಮಿ ಜತೆಗಿನ ಭೇಟಿ ನಂತರ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ವಿಶ್ವನಾಥ, ಸಚಿವ ಡಿ.ಕೆ.ಶಿವಕುಮಾರ್‌ ಜತೆಯೂ ಪ್ರತ್ಯೇಕ ವಾಗಿ ಮಾತುಕತೆ ನಡೆಸಿದರು. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಮುನ್ನ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯೂ ಇದೆ.
Advertisement

Udayavani is now on Telegram. Click here to join our channel and stay updated with the latest news.

Next