ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಇದ್ದಿದ್ದರಿಂದ ನಿದ್ರೆ, ಸುಸ್ತು ಎಲ್ಲಾ ಅಡಿಯಿಡುತ್ತಿತ್ತು. ಆದ್ರೂ ನನ್ನ ಬಂಗಾರಿ ಹಾಂ, ಹೂಂ ಎನ್ನುತ್ತಲೇ ಅಮ್ಮನ ಮೇಕಪ್‌ಗೆ ಶರಣಾಗಿ ಗೊಂಬೆಯಂತೆ ರೆಡಿಯಾದಳು. ದಿನನಿತ್ಯದ ಪರಿಪಾಠಕ್ಕಿಂತ ಇವತ್ತೇನೋ ಸಂಭ್ರಮಯೆನ್ನುವ ಖುಷಿ ಅವಳಿಗೆ.
ಅಂದು ಮಗಳ ಸ್ಕೂಲಿನ ವಾರ್ಷಿಕೋತ್ಸವವಿತ್ತು. ಬೆಳಗ್ಗೆಯಿಂದಲೇ ಒಂಥರಾ ಟೆನ್‌ಶನ್, ಇನ್ನೊಂದು ಕಡೆ ಖುಷಿ… ಯಾಕಂದ್ರೆ, ಆಗಷ್ಟೇ ಶಾಲೆಗೆ ಹೋಗುವ ಖಾತೆ ತೆರೆದಿದ್ದ, ಎಲ್ ಕೆಜಿ ಓದುತ್ತಿದ್ದ ಪುಟ್ಟ ಮಗಳು ಮೊದಲ ಬಾರಿಗೆ ಸ್ಟೇಜ್ ಹತ್ತುವ ಸಂಭ್ರಮ ಅವತ್ತು ನಡೆಯಲಿತ್ತು.
ಸ್ಕೂಲಲ್ಲಿ, ಮನೆಯಲ್ಲಿ ಚೆನ್ನಾಗೇ ಡ್ಯಾನ್ಸ್ ಮಾಡುವ ಮಗಳು ಇವತ್ತು ಅಳುತ್ತಾ ರಂಪ ಮಾಡಿದರೆ? “ಅಮ್ಮಾ, ನಾನ್ ಸ್ಟೇಜ್‌ಗೆ ಹೋಗಲ್ಲಾ ಡ್ಯಾನ್ಸ್ ಮಾಡಲ್ಲ’ ಅಂತ ರಚ್ಚೆ ಹಿಡಿದರೆ? ಮುಗೀತು ಕಥೆ!ಅಮ್ಮ ಮತ್ತು ಟೀಚರ್ ಇಬ್ಬರೂ ಪ್ರೋಗ್ರಾಂ ಎಂಬ ಪರೀಕ್ಷೆಯಲ್ಲಿ ಫೇಲ್… ಹೀಗೆ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ, ಮಗಳು ಬೇರೆ ಅವತ್ತು ಬೇಗ ಎದ್ದು “ಎಷ್ಟೊತ್ತಿಗೆ ಡ್ಯಾನ್ಸ್? ಈಗ್ಲೆ ಮೇಕಪ್ ಮಾಡಿ ರೆಡಿ ಮಾಡು. ಸ್ಕೂಲ್‌ಗೆ ಹೋಗೋಣ ಲೇಟ್ ಆಯ್ತು’ ಅಂತ ತಲೆ ತಿನ್ನುತ್ತಿದ್ದಳು.
ಹೇಳಿ ಕೇಳಿ ಮಕ್ಕಳ ಮೂಡ್ ಒಂದೇ ರೀತಿ ಇರಲ್ಲ. ಅದರಲ್ಲೂ ನಮ್ಮ ಚಿನ್ನಾರಿಗೋ, ಸ್ಕೂಲಲ್ಲಿ ಅಮ್ಮನ ಮುಖ ಕಂಡ ಕೂಡಲೇ ಅಳು, ನಗು, ಹಠ ಒಟ್ಟೊಟ್ಟಿಗೇ ಬರುತ್ತದೆ. ಆಗ ಈ ಸ್ಕೂಲ್, ಓದು-ಬರಹ, ಡ್ಯಾನ್ಸ್, ಆಟ-ತುಂಟಾಟ ಯಾವುದೂ ಬೇಡ. ಅಮ್ಮನ ಸೆರಗೊಂದೇ ಸಾಕು ಬಚ್ಚಿಟ್ಟುಕೊಳ್ಳಲು, ಹಾಗೆಯೇ ಮಡಿಲಿಗೇರಲು. ಹಾಗಾಗಿಯೇ ಅವಳಿಗೆ ಟೀಚರ್ ಕೊಟ್ಟ ನಿಕ್ ನೇಮ್ “ಪಲ್ಲಕ್ಕಿ’. ನಾನ್ ಏನಾದರೂ ಶಾಲೆ ಕಡೆಗೆ ಹೋದರೆ ಅವಳದ್ದು ಒಂದೇ ಹಠ; ಅಮ್ಮಾ ಎತ್ಕೊ.
ಇವತ್ತು ಹಾಗೇ ಮಾಡಿಬಿಟ್ಟರೆ? ದೇವರೇ, ಹಾಗಾಗದಿರಲಪ್ಪ. ನನ್ನ ಮಗಳು ಚೆನ್ನಾಗಿ ಡ್ಯಾನ್ಸ್ ಮಾಡಲಪ್ಪ ಅಂತ ಮನದಲ್ಲಿ ಕೈ ಮುಗಿದದ್ದೇ ಮುಗಿದದ್ದು. ಬಹುಶಃ ಚಿಕ್ಕವಳಿ¨ªಾಗ ನಾನು ಸ್ಟೇಜ್ ಹತ್ತುವಾಗಲೂ ಇಷ್ಟೊಂದು ತಳಮಳ, ಚಡಪಡಿಕೆ ಪಟ್ಟಿರಲಿಲ್ಲವೇನೋ. ಗಡಿಬಿಡಿ -ಗಲಿಬಿಲಿಗಳ ಜೊತೆಗೇ ನಮ್ಮನೆ ರಾಜಕುಮಾರಿಗೆ ಒಂದಿಷ್ಟು ಉಪದೇಶದ ಟಿಪ್ಸ್ ಬೇರೆ ಕೊಟ್ಟೆ. ಮೇಲಿಂದ ಚಾಕಲೇಟ್, ಐಸ್‌ಕ್ರೀಮ್‌ಗಳ ಲಂಚದ ಆಸೇನೂ ಇಟ್ಟೆ! ಅವಳಿಗೋ ಎಲ್ಲವೂ ಹೊಸತು. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಇದ್ದಿದ್ದರಿಂದ ನಿದ್ರೆ, ಸುಸ್ತು ಎಲ್ಲಾ ಅಡಿಯಿಡುತ್ತಿತ್ತು. ಆದ್ರೂ ನನ್ನ ಬಂಗಾರಿ ಹಾಂ, ಹೂಂ ಎನ್ನುತ್ತಲೇ ಅಮ್ಮನ ಮೇಕಪ್‌ಗೆ ಶರಣಾಗಿ ಗೊಂಬೆಯಂತೆ ರೆಡಿಯಾದಳು. ದಿನನಿತ್ಯದ ಪರಿಪಾಠಕ್ಕಿಂತ ಇವತ್ತೇನೋ ಸಂಭ್ರಮಯೆನ್ನುವ ಖುಷಿ ಅವಳಿಗೆ. ಮುದ್ದು ಮುದ್ದಾಗಿ ಮಾತಾಡುತ್ತಾ ಉತ್ಸಾಹದಿಂದಲೇ ಸ್ಕೂಲ್‌ಗೆ ಹೊರಟಳು .
ಶಾಲೆಯ ವಾರ್ಷಿಕೋತ್ಸವ ಅಂದ ಮೇಲೆ ಕೇಳಬೇಕೆ? ಸ್ವಾಗತ,ಅಧ್ಯಕ್ಷರ ಭಾಷಣ, ಅತಿಥಿಗಳ ಮಾತು, ಬಹುಮಾನ ವಿತರಣೆ, ವಂದನಾರ್ಪಣೆಗಳ ಸಂಭ್ರಮವೆಲ್ಲವೂ ಮುಗಿಯುವ ವೇಳೆಗೆ ನಮ್ಮ ಪುಟಾಣಿ ನಿದ್ರಾದೇವಿಯ ತೆಕ್ಕೆಯಲ್ಲಿದ್ದಳು. ಈಗೇನಪ್ಪಾ ಮಾಡೋದು, ಹೇಗೆ ಎಬ್ಬಿಸುವುದೆನ್ನುವ ಗೊಂದಲದಲ್ಲಿದ್ದಾಗ, ನಾಲ್ಕೈದು ಪ್ರೋಗ್ರಾಂ ಆದ ಮೇಲೆ ನಮ್ಮ ಮಕ್ಕಳ ಕಾರ್ಯಕ್ರಮ. ಅಷ್ಟರೊಳಗೆ ಎಬ್ಬಿಸೋಣ ಎಂದು ಟೀಚರ್ ಧೈರ್ಯ ಹೇಳಿದರು. ಕೊನೆಗೂ, ಇಬ್ಬರೂ ಸೇರಿ ಮಗಳನ್ನು ಡ್ಯಾನ್ಸ್ ಮಾಡುವ ಮೂಡಿಗೆ ತರುವಲ್ಲಿ ಸಫಲರಾದೆವು. ಕಣ್ಣುಜ್ಜುತ್ತಲೇ ಎದ್ದ ಮಗಳು, “ಈಗ ನನ್ನ ಡ್ಯಾನ್ಸಾ ಅಮ್ಮ?… ಎಂದು ಕೇಳಿ, ಉತ್ತರ ಪಡೆದುಕೊಂಡು ಜಿಂಕೆ ಮರಿ ಥರ ಜಿಗಿಯುತ್ತಾ, ದೊಡ್ಡ ಸ್ಟೇಜ್ ಮೇಲೆ ಮೊದಲ ಸಾಲಿನಲ್ಲಿ ನಗುನಗುತ್ತಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದಳು. ಆಗ, ನನ್ನ ಕಣ್ಣಂಚು ಜಿನುಗಿತ್ತು. ಬೆಳಗಿನಿಂದ ಕಾಡುತ್ತಿದ್ದ ತಳಮಳಕ್ಕೆ ತೃಪ್ತಿಯ ವಿರಾಮ ಸಿಕ್ಕಿತ್ತು.
ಮೊನ್ನೆ ಮೊನ್ನೆ ಮಡಿಲಿಗೆ ಬಂದ ಮಗಳು, ಇವತ್ತು ಇಷ್ಟೊಂದು ಜನರ ನಡುವೆ ಸಂಕೋಚ-ಭಯ ಬದಿಗೊತ್ತಿ ನಕ್ಕು ನಲಿದಾಗ, “ನಿಮ್ಮ ಮಗಳು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದಾಳು’ ಅಂತ ಎಲ್ಲರೂ ಹೊಗಳಿದಾಗ, ಮಗಳು ಕೊಟ್ಟ “ಅಮ್ಮನ ಪಟ್ಟ’ ಸಾರ್ಥಕವಾಗಿತ್ತು. ಅಮ್ಮನೆನ್ನುವ ಕಿರಿಟಕ್ಕೆ ಮಗಳು ನೀಡಿದ ಹೆಮ್ಮೆಯ ಗರಿ ಹೊತ್ತು ಬೀಗುವಾಗ ಮಾತು ಮೌನವಾಗಿತ್ತು. ಮನಸ್ಸು ತುಂಬಿ ಬಂದಿತ್ತು. ಮಕ್ಕಳು ನೀಡುವ ಇಂಥ ಪುಟ್ಟ ಪುಟ್ಟ ಕ್ಷಣಗಳ ದೊಡ್ಡ ಸಂತಸ ಅಮ್ಮಂದಿರ ಬಾಳಪುಟದಲ್ಲಿ ಮರೆಯಲಾಗದ ಆಟೋಗ್ರಾಫ್ ಇದ್ದಂತೆ.
-ಸುಮಾ ಸತೀಶ್