Advertisement

ನೀರು ಹಂಚದೆ ತಾಲೂಕಿನ ರೈತರಿಗೆ ಅನ್ಯಾಯ

01:24 PM Jul 07, 2019 | Suhan S |

ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿಗೆ ನೀರು ಹಂಚಿಕೆಯಾಗುವವರೆಗೂ ನೀರಿಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ತಿಮ್ಲಾಪುರ ಗೇಟ್‌ನಲ್ಲಿ ಬಿಳಿಗೆರೆ ಪಂಚಾಯಿತಿಯ ಗ್ರಾಮಗಳ ಬಹಿರಂಗ ಸಭೆ ನಡೆಯಿತು.

Advertisement

ನೀರು ಹಂಚದೆ ಅನ್ಯಾಯ: ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನ ಹಳ್ಳಿ ಬಿ.ಎಸ್‌. ದೇವರಾಜು ಮಾತನಾಡಿ, ಸತತ ಬರದಿಂದ ತಾಲೂಕಿನ ಜಲ ಮೂಲಗಳು ಬತ್ತಿವೆ. ರೈತರು ಸಂಕಷ್ಟದಲ್ಲಿದ್ದು, ಇಲ್ಲಿನ ಆರ್ಥಿಕ ಮತ್ತು ಪರಿಸರ ಪುನಶ್ಚೇತನಗೊಳ್ಳಬೇಕಾದರೆ ಕೆರೆಗಳಿಗೆ ನೀರು ತುಂಬಿಸಬೇಕು. ಇದೇ ಭಾಗದಲ್ಲಿ ಎತ್ತಿನಹೊಳೆ ಹಾದು ಹೋಗುತ್ತಿದ್ದರೂ, ಇಲ್ಲಿಗೆ ನೀರು ಹಂಚದೆ ಅನ್ಯಾಯ ಮಾಡಿರುವುದು ರೈತರನ್ನು ಶೋಷಿಸಿದಂತಾಗಿದೆ. ಯೋಜನೆಯಲ್ಲಿ ಈ ವ್ಯಾಪ್ತಿಗೆ ನೀರು ನಿಗದಿಯಾಗು ವವರೆಗೆ ಹೋರಾಟ ತೀವ್ರಗೊಳಿಸಬೇಕು. ರೈತರು ತಮ್ಮ ಗ್ರಾಮಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆಕೊಟ್ಟರು.

ಹೋರಾಟಕ್ಕೆ ಸಜ್ಜಾಗಿ: ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ದೇಗುಲ, ಮಠಗಳು, ಬಡವರಿಗೆ ದಾನ ಧರ್ಮ ಮಾಡುತ್ತಿದ್ದ ಪ್ರತಿಯೊಬ್ಬ ರೈತರು ಇಂದು ಸರ್ಕಾರವನ್ನು ಬೇಡುವಂತಾಗಿರುವುದು ದುರಂತ. ಸರ್ಕಾರದ ಮುಂದೆ ಭಿಕ್ಷುಕರ ರೀತಿ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿಯನ್ನು ರಾಜಕಾರಣಿಗಳು ನಿರ್ಮಿಸಿದ್ದಾರೆ. ರೈತರು ತಮ್ಮ ಸ್ವಾಭಿಮಾನ ಸ್ಥಾಪಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು.

ಬಿಳಿಗೆರೆಪಾಳ್ಯದ ರೈತ ಎಂ.ನಾಗೇಶ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಯಾವುದೇ ಅಧಿಕಾರಿಗಳಾಗಲಿ ಅಥವಾ ತಾಲೂಕು ಆಡಳಿತ ವಾಗಲಿ ರೈತರೊಂದಿಗೆ ಕನಿಷ್ಠ ಚರ್ಚೆಯನ್ನೂ ಮಾಡಿಲ್ಲ. ಹೊಳೆ ನೀರು ಹಂಚಿಕೆ ಹಾಗೂ ಯೋಜನೆ ಸಂತ್ರಸ್ತರಿಗೆ ಭೂಪರಿಹಾರದ ವಿಚಾರವಾಗಿ ತಾಲೂಕು ಆಡಳಿತ ರೈತರು ಮತ್ತು ಯೋಜನಾಧಿಕಾರಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಒಳನಾಡು ನೀರಾವರಿ ಸಮಿತಿಯ ರಾಜಣ್ಣ ಮಾತನಾಡಿ, ತಾಲೂಕಿನ ಕೆರೆ ಕಟೆೆrಗಳು, ಜಲ ಮೂಲ ಕಣ್ಣುಗಳಾದ ರಾಜಕಾಲುವೆ, ಹಳ್ಳಗಳನ್ನು ದಾಟಿ ಈ ಯೋಜನೆ ಹೋಗುತ್ತದೆ. ಎತ್ತಿನಹೊಳೆಯಿಂದ ಇಲ್ಲಿಗೆ ನೀರು ಹಂಚದಿರುವುದು ಇದು ಯೋಜನಾ ನಿರಾಶ್ರಿತ ಪ್ರದೇಶವಾಗಲು ಕಾರಣವಾಗುತ್ತದೆ ಎಂದರು.

Advertisement

ದಿಕ್ಕು ತಪ್ಪಿಸುತ್ತಿರುವ ರಾಜಕಾರಣಿಗಳು:ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ, ಎತ್ತಿನಹೊಳೆ ನೀರಾವರಿ ಯೋಜನೆ ನೀರಾವರಿ ತಜ್ಞ ಪರಮಶಿವಯ್ಯ ಕನಸಾಗಿತ್ತು. ಮಧ್ಯ ಕರ್ನಾಟಕ ಸೇರಿದಂತೆ ಸುಮಾರು 10 ಸಾವಿರ ಕೆರೆಗಳಿಗೆ ಸಿದ್ಧಪಡಿಸಿದ ಯೋಜನೆಯನ್ನು ಕೆಲವು ರಾಜಕಾರಣಿಗಳು ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ಕ್ಷೇತ್ರಗಳ ಮತ ಬ್ಯಾಂಕ್‌ಗೆ ಅನುಕೂಲವಾಗುವಂತೆ ಯೋಜನೆ ತಿದ್ದುಪಡಿ ಮಾಡಿ ಇಲ್ಲಿನ ರೈತರಿಗೆ ಅನ್ಯಾಯ ವೆಸಗಿದ್ದಾರೆ ಎಂದು ತಿಳಿಸಿದರು.

ಬೆಲೆ ಕಾವಲು ಸಮಿತಿಯ ಶ್ರೀಕಾಂತ್‌ ಮಾತನಾಡಿ, ಯುವ ಪೀಳಿಗೆಗೆ ಕೆರೆ, ಕಟ್ಟೆ, ಹಳ್ಳಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ಭೂ ಸಂತ್ರಸ್ತ ಸಮಿತಿಯ ಮನೋಹರ್‌ ಪಟೇಲ್, ಜಾಗೃತಿ ಸಂಸ್ಥೆಯ ರೇಣುಕಾರಾಧ್ಯ, ಸೌಹಾರ್ದ ತಿಪಟೂರು ಸಮಿತಿಯ ಅಲ್ಲಾಭಕಾಶ್‌, ಕನ್ನಡ ರಕ್ಷಣಾ ವೇದಿಕೆ ವಿಜಯ್‌ ಕುಮಾರ್‌, ನವಕರ್ನಾಟಕ ಯುವ ವೇದಿಕೆಯ ಸಿದ್ದು, ತಿಮ್ಲಾಪುರ, ಬೆಳಿಗೆರೆ, ಬಿಳಿಗೆರೆ ಪಾಳ್ಯ, ಭದ್ರಾಪುರ, ಜಕ್ಕನಹಳ್ಳಿ, ಚೌಡ್ಲಾಪುರ, ಭೈರಾಪುರ, ಮದ್ಲೇಹಳ್ಳಿ, ಶಿಡ್ಲೇಹಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next