Advertisement

ನಿರುದ್ಯೋಗ ನಿವಾರಣೆ ಇಂದಿನ ತುರ್ತು :ದೇವನೂರು ಮಹಾದೇವ

09:54 AM Feb 04, 2018 | |

ಮೂಡಬಿದಿರೆ: ಇಂದಿನ ಎಲ್ಲ ವಿಧ್ವಂಸಕತೆಯ ಮೂಲದಲ್ಲಿರುವ ನಿರುದ್ಯೋಗ ನಿವಾರಣೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮುಂದೆ ಬಂದು ತಮ್ಮ ಮಾತು ಉಳಿಸಿಕೊಡಬೇಕು ಎಂದು ಚಿಂತಕ, ಸಾಹಿತಿ ದೇವನೂರ ಮಹಾದೇವ ಕರೆ ನೀಡಿದರು.

Advertisement

ಮೂಡಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನ ಮತ್ತು ಮೂಡಬಿದಿರೆ ಕೋ – ಆಪರೇಟಿವ್‌ ಸರ್ವೀಸ್‌ ಬ್ಯಾಂಕ್‌ ಆಶ್ರಯದಲ್ಲಿ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಉದ್ಯೋಗವಿಲ್ಲದೆ ಯುವಜನತೆ ದಿಕ್ಕುಕಾಣದೆ ಕುಪಿತರಾಗಿ ಮಚ್ಚು, ಬಂದೂಕು ಹಿಡಿಯುತ್ತಿ ದ್ದಾರೆ; ಅದಕ್ಕೆಲ್ಲ ಸರಕಾರಿ ಕೃಪೆಯೂ ಇರುವ ಹಾಗಿದೆ. ಆಳ್ವಿಕೆ ನಡೆಸುವವರು ಜಾತಿ, ಮತ, ಭಾಷೆ, ಗಡಿ ಮೊದಲಾದಭಾವನಾತ್ಮಕ ಭೂತಗಳನ್ನು ಕೆರಳಿಸಿ ದಿಕ್ಕು ತಪ್ಪಿಸಿ ನಿಜಕ್ಕೂನಮ್ಮನ್ನೆಲ್ಲ ಕಿತ್ತು ತಿನ್ನುವ ಅನೇಕ ಸಮಸ್ಯೆಗಳನ್ನು ಮರೆಸುತ್ತಾರೆ ಎಂಬ ಐತಿಹಾಸಿಕ ಮಾತುಗಳನ್ನು ಪುಷ್ಟೀಕರಿಸುವ ಸಂಗತಿಗಳೇ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸ್ತ್ರಿ -ಮೋದಿ: ಹೋಲಿಕೆ ಸಲ್ಲದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಅವರನ್ನು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರಿಗೆ ಹೋಲಿಸಲಾಗುತ್ತಿದೆ. ಶಾಸ್ತ್ರಿ ಇದ್ದಿದ್ದರೆ ಭಾರತದಲ್ಲಿ ಶೇ. 1ರಷ್ಟಿರುವ ಜನರ ಕೈಯಲ್ಲಿ ಶೇ. 73ರಷ್ಟು ಸಂಪತ್ತು ಇರುವಂತೆ ಆಗುತ್ತಿರಲಿಲ್ಲ. ಅವರ ಅಕ್ಕಪಕ್ಕ ಅಂಬಾನಿ ಸಹೋದರರು, ಅದಾನಿ ಇರುತ್ತಲೇ ಇರಲಿಲ್ಲ. ಈ ಮೂವರು ಮಹಾಶಯರು ಬ್ಯಾಂಕಿಗೆ ಮರುಪಾವತಿಸದ 3 ಲಕ್ಷ ಕೋ.ರೂ. ಸಾಲ ಮೊತ್ತವನ್ನು ಮನ್ನಾ ಮಾಡುತ್ತಲೇ ಇರಲಿಲ್ಲ ಎಂದು ದೇವನೂರು ಹೇಳಿದರು.

ಕಾರಂತ ಪುರಸ್ಕಾರ
“ದ್ವಾಪರ’ ಕೃತಿಗಾಗಿ ಕಂನಾಡಿಗ ನಾರಾಯಣ ಅವರಿಗೆ ಶಿವರಾಮ ಕಾರಂತ ಪುರಸ್ಕಾರ ಪ್ರದಾನ ಮಾಡಲಾಯಿತು. ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನಗೈದರು. ಅತಿಥಿಗಳಾಗಿ ಶಾಸಕ ಕೆ. ಅಭಯಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಜಿ. ಎಸ್‌. ಸಿದ್ದರಾಮಯ್ಯ ಭಾಗವಹಿಸಿದ್ದರು.

ತಮ್ಮ ಆಯ್ಕೆಯ ಕನ್ನಡ ಪುಸ್ತಕ ಓದು ಮತ್ತು ಅನಿಸಿಕೆ ವ್ಯಕ್ತಪಡಿಸುವ ವಿಶಿಷ್ಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಅಮರನಾಥ ಶೆಟ್ಟಿ ವಿತರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಕೆ. ಕೃಷ್ಣ ರಾಜ ಹೆಗ್ಡೆ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಡಾ| ಜಯಪ್ರಕಾಶ ಮಾವಿನಕುಳಿ ನಿರೂಪಿಸಿದರು. ಎಂಸಿಎಸ್‌ ಬ್ಯಾಂಕಿನ ಸಿಇಒ ಚಂದ್ರಶೇಖರ ಎಂ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next