Advertisement

ಅಂಡರ್‌ಪಾಸ್‌ ನಿರ್ವಹಣೆ ಯಾರೆಂಬುದೇ ಗೊತ್ತಿಲ್ಲ!

12:37 PM Jun 08, 2023 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ನ ನೀರಿನಲ್ಲಿ ಕಾರು ಮುಳುಗಿ ಮಹಿಳಾ ಟೆಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಬೆನ್ನಲ್ಲೇ ಬುಧವಾರ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್‌ರಾವ್‌, ಲೋಕಾಯುಕ್ತ ಎಂಜಿನಿಯರ್‌ಗಳು ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಹಾಗೆಯೇ ಮೃತ ಯುವತಿ ದಾಖಲಾಗಿದ್ದ ಆಸ್ಪತ್ರೆಗೂ ಭೇಟಿ ನೀಡಿ ವೈದ್ಯರ ಲೋಪದೋಷಗಳ ಆರೋಪದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಘಟನೆಗೆ ಕಾರಣವೇನು? ಏನೆಲ್ಲಾ ಸಮಸ್ಯೆ ಇತ್ತು? ಎಂಬ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಒಂದೆರಡು ಟ್ಯಾಂಕರ್‌ಗಳ ನೀರು ಹರಿಸುವ ಮೂಲಕ ನೀರು ಒಳಚರಂಡಿ ಮೂಲಕ ಸರಾಗವಾಗಿ ನೀರು ಹರಿದು ಹೋಗುತ್ತದೆಯೇ? ಎಂದು ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಮೂಲಗಳ ಪ್ರಕಾರ, ಎಂಜಿನಿಯರ್‌ಗಳು ಹೇಳುವಂತೆ ಅಂಡರ್‌ಪಾಸ್‌ ವಿನ್ಯಾಸವೇ ಸರಿಯಾಗಿಲ್ಲ. ಅದರಲ್ಲಿ ಒಂದೇ ಒಂದು ಒಳಚರಂಡಿ ಮಾತ್ರ ಇದೆ. ಅಲ್ಲದೆ, ಇದು ಬಹಳ ಆಳಲಾದ ಅಂಡರ್‌ಪಾಸ್‌ ಆಗಿದ್ದು, 2009ರಲ್ಲಿ ನಿರ್ಮಿಸಲಾಗಿದೆ. ಆ ನಂತರ ಅಂಡರ್‌ ಪಾಸ್‌ ಅನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಪ್ರತಿ ಮಳೆಗಾಲದಲ್ಲಿ ಒಳಚರಂಡಿಗಳನ್ನು ಸ್ವತ್ಛಗೊಳಿಸಿದಂತೆ ಅಂಡರ್‌ಪಾಸ್‌ಗಳ ಒಳಚರಂಡಿ ಸ್ವತ್ಛಗೊಳಿಸಬೇಕಿತ್ತು. ಆದರೆ, ಈ ಕೆಲಸ ನಡೆದಿಲ್ಲ ಎಂಬುದು ಗೊತ್ತಾಗಿದೆ.

ನಿರ್ವಹಣೆ ಯಾರು ಎಂಬುದೇ ಗೊತ್ತಿಲ್ಲ!: ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಎಂಜಿನಿಯರ್‌ಗಳಿಗೂ ಸ್ವಚ್ಛತೆ ಅಥವಾ ನಿರ್ವಹಣೆ ಬಗ್ಗೆ ಮಾಹಿತಿಯೇ ಇಲ್ಲ. ಯಾರು ನಿರ್ವಹಿಸಬೇಕು? ಯಾರಿಗೆ ಅದರ ಹೊಣೆಗಾರಿಕೆ ನೀಡಲಾಗಿದೆ ಎಂಬುದು ಗೊತ್ತಿಲ್ಲ. ಪ್ರಾಥಮಿಕವಾಗಿ ಒಳಚರಂಡಿಯಲ್ಲಿ ಪ್ಲಾಸ್ಟಿಕ್‌, ಬಟ್ಟೆಗಳು ಸಿಲುಕಿ ಒಳಚರಂಡಿ ಮುಚ್ಚಿಕೊಂಡಿದೆ. ಹೀಗಾಗಿ ಭಾರೀ ನೀರು ಶೇಖರಣೆಗೊಂಡು ದುರ್ಘ‌ಟನೆ ನಡೆದಿರುವ ಸಾಧ್ಯತೆಯಿದೆ ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ನಿರ್ವಹಣೆ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕಿದೆ. ಯಾವ ರೀತಿ ನಿರ್ವಹಣೆ ಮಾಡಬೇಕು ಅಥವಾ ಮಾಡುತ್ತಿದ್ದರು. ಯಾರಿಗೆ ಅಂಡರ್‌ಪಾಸ್‌ಗಳ ಸ್ವಚ್ಛತೆ ಅಥವಾ ನಿರ್ವಹಣೆ ಹೊಣೆ ನೀಡಲಾಗಿದೆ ಎಂಬುದು ಮುಂದಿನ ವಿಚಾರಣೆಯಿಂದ ಗೊತ್ತಾಗಬೇಕಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.

Advertisement

ತುರ್ತಾಗಿ ನಿರ್ವಹಣೆ ಚರ್ಚೆ: ನಗರದಲ್ಲಿ ನೂರಾರು ಅಂಡರ್‌ಪಾಸ್‌ಗಳಿದ್ದು, ಮುಂದಿನ ದಿನಗಳಲ್ಲಿ ಅವುಗಳು ಕೂಡ ಮೃತ್ಯುಕೂಪವಾಗುವ ಸಾಧ್ಯತೆಯಿದೆ. ಬಹುತೇಕ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತದೆ. ಸರಿಯಾಗಿ ನೀರು ಹೊರಗಡೆ ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ತುರ್ತಾಗಿ ಅವುಗಳ ನಿರ್ವಹಣೆ ಬಗ್ಗೆ ಸ್ಥಳೀಯ ಸಂಸ್ಥೆಗಳ ಜತೆ ಚರ್ಚಿಸಬೇಕಿದೆ. ಈ ಕುರಿತು ಲೋಕಾಯುಕ್ತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ನಗರದಲ್ಲಿ ಮೇ 21 ರಂದು ಸುರಿದ ಭಾರಿ ಮಳೆಗೆ ಕೆ.ಆರ್‌.ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿದ ಪರಿಣಾಮ ಇನ್ಫೋಸಿಸ್‌ ಉದ್ಯೋಗಿ ಭಾನುರೇಖಾ ಮೃತಪಟ್ಟಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್ ಅವರು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದ್ದರು. ‌

ವೈದ್ಯರ ಲೋಪ ಪತ್ತೆಯಾಗಿಲ್ಲ?: ಇನ್ನು ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ಭಾನುರೇಖಾರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ಯಲಾಗಿತ್ತು. ಯುವತಿ ಆಟೋದಲ್ಲಿ ಇದ್ದಾಗಲೇ ಕೆಲವೊಂದು ಪರೀಕ್ಷೆ ನಡೆಸಿದ್ದಾರೆ. ಆಗಲೇ ಆಕೆ ಮೃತಪಟ್ಟಿದ್ದಾರೆ. ಹೀಗಾಗಿ ಒಳಗಡೆ ದಾಖಲಿಸಿಕೊಳ್ಳಲು ನಿರಾಕರಿಸಲಾಗಿತ್ತು ಎಂದು ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಆಟೋದಲ್ಲೇ ಆಕೆಯ ಕಣ್ಣಿಗೆ ಟಾರ್ಚ್‌ ಬಿಟ್ಟು ನೋಡಲಾಗಿತ್ತು. ಒಂದು ವೇಳೆ ಆಕೆ ಸ್ಪಂದಿಸುತ್ತಿದ್ದರೆ, ಮೆದುಳು ನಿಷ್ಕ್ರಿಯಗೊಂಡಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಅಂದು ಆಕೆಯ ಕಣ್ಣುಗಳಿಗೆ ಟಾರ್ಚ್‌ ಬಿಟ್ಟು ನೋಡಿದಾಗ ಆಕೆ ಪ್ರತಿಕ್ರಿಯಿಸಲಿಲ್ಲ. ಜತೆಗೆ ಇಸಿಜಿ ಯಂತ್ರದಿಂದಲೂ ಪರೀಕ್ಷಿಸಿದಾಗ ಸ್ಪಂದನೆ ಇರಲಿಲ್ಲ. ಈ ರೀತಿ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಅಂದರೆ ಆಟೋದಲ್ಲೇ ಆಕೆ ಮೃತಪಟ್ಟಿದ್ದರು. ಆದರೂ ಸ್ಥಳೀಯರು ಆಕ್ರೋಶಗೊಂಡಿದ್ದರಿಂದ ದಾಖಲಿಸಿಕೊಳ್ಳಲಾಗಿತ್ತು ಎಂದು ವೈದ್ಯರು ಹೇಳುತ್ತಿದ್ದಾರೆ. ಇನ್ನು ಆಸ್ಪತ್ರೆಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರೀಶೀಲಿಸಲಾಗಿದೆ. ಘಟನೆ ದಿನ ಕರ್ತವ್ಯ ನಿರ್ವಹಿಸಿದ ವೈದ್ಯರ ವಿಚಾರಣೆ ನಡೆಸಬೇಕಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next