ಬೆಂಗಳೂರು: ಸೌಂದರ್ಯೀಕರಣಕ್ಕೆ ಒತ್ತು ಕೊಡುವ ಭರದಲ್ಲಿ ಸಾಮಾನ್ಯವಾಗಿ ಕಾರ್ಪೋರೇಟ್ ಕಚೇರಿ ಕಟ್ಟಡಗಳಲ್ಲಿ ಕಂಡುಬರುವ ಎಸಿಪಿ (ಅಲ್ಯು ಮಿನಿಯಂ ಸಂಯೋಜಿತ ಪ್ಯಾನೆಲ್) ಶೀಟ್ ಗಳನ್ನು ಸದಾ ವಾಹನಗಳ ಸಂಚಾರ ಇರುವಂತಹ ಅಂಡರ್ಪಾಸ್ಗಳಲ್ಲಿ ಅಳವಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದ್ದು, ಇದರ ಮೊದಲ ಪ್ರಯೋಗ ವಿಜಯನಗರ ಬಳಿಯ ಟೋಲ್ಗೇಟ್ ಅಂಡರ್ಪಾಸ್ನಲ್ಲಿ ನಡೆಸುತ್ತಿದೆ.
ತಾಂತ್ರಿಕವಾಗಿ “ಫಾಲ್ಸ್ ಸೀಲಿಂಗ್’ ಎಂದು ವಿಶ್ಲೇಷಿಸಲಾಗುವ ಈ ಎಸಿಪಿ ಶೀಟ್ಗಳ ಅಳವಡಿಕೆಯಿಂದ ಅಂಡರ್ಪಾಸ್ಗಳು ಮೇಲ್ನೋಟಕ್ಕೆ ಲಕಲಕ ಅಂತ ಹೊಳೆಯಬಹುದು. ಆದರೆ, ಭವಿಷ್ಯ ದಲ್ಲಿ ವಾಹನ ಸವಾರರ ಹಿತದೃಷ್ಟಿಯಿಂದ ಇದೊಂದು ಅಪಾಯಕಾರಿ ಪ್ರಯೋಗವಾಗಿದೆ. ಮುಂದೆ ಯಾವತ್ತಾದರೂ ಅಂಡರ್ಪಾಸ್ಗಳಲ್ಲಿ ಕಂಡುಬರಬಹುದಾದ ಬಿರುಕುಗಳು ಈ ಸೌಂದರ್ಯದ ಹಿಂದೆ ಮುಚ್ಚಿಹೋಗುತ್ತವೆ. ಅಷ್ಟೇ ಅಲ್ಲ, ವಾಹನ ಸವಾರರ ಜೀವ ಪಣಕ್ಕಿಟ್ಟಂತಾಗಲಿದೆ ಎಂದು ತಜ್ಞ ಎಂಜಿನಿಯರ್ಗಳಿಂದ ಆತಂಕ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಈ ಮಾದರಿಯ ಶೀಟ್ಗಳನ್ನು ಸೌಂದರ್ಯ ಹೆಚ್ಚಿಸಲು ಕಚೇರಿಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲಿ ಈ ಶೀಟ್ಗಳ ಮೇಲೆ ಅಂತಹ ಒತ್ತಡಗಳು ಇರುವುದಿಲ್ಲ. ಆದರೆ, ಅಂಡರ್ ಪಾಸ್ಗಳ ಮೇಲೆ ಮತ್ತು ಕೆಳಗೆ ದಿನದ 24 ಗಂಟೆ ವರ್ಷಪೂರ್ತಿ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಹಾಗಾಗಿ, ಅಂಡರ್ಪಾಸ್ ಕಂಪನದಿಂದ ಸೂð ಸಡಿಲಗೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಸರ್ಕಾರದ ನಿವೃತ್ತ ಮುಖ್ಯ ಎಂಜಿನಿಯರೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಕಳಚಿ ಬಿದ್ದಿದ್ದ ಜಿಪ್ಸಂ ಫಲಕ: “ನನ್ನ ಪ್ರಕಾರ ಅಂಡರ್ಪಾಸ್ಗಳಲ್ಲಿ ಈ ರೀತಿಯ ಫಾಲ್ಸ್ ಸೀಲಿಂಗ್ ಮಾಡುತ್ತಿರುವುದು ಇದೇ ಮೊದಲು. ದಶಕದ ಹಿಂದೆ ನಗರದ ಮಹಾರಾಣಿ ಕಾಲೇಜು ಬಳಿಯ ಅಂಡರ್ಪಾಸ್ಗೆ ಇದೇ ಮಾದರಿಯಲ್ಲಿ ಅಲ್ಯುಮಿನಿಯಂ ಚೂರುಗಳಿಂದ ಕೂಡಿದ ಜಿಪ್ಸಂ ಫಲಕಗಳನ್ನು ಹಾಕಲಾಗಿತ್ತು. ಅದು ಕಳಚಿ ಜೋತುಬಿದ್ದು ಆತಂಕ ಸೃಷ್ಟಿಸಿತ್ತು. ಈ ಪ್ರಯೋಗ ಕೂಡ ಅದರ ಮುಂದುವರಿದ ಭಾಗ’ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.
“ಅಂಡರ್ಪಾಸ್ಗಳ ಸೌಂದರ್ಯೀಕರಣಕ್ಕೆ ಸಾಕಷ್ಟು ಮಾರ್ಗಗಳಿವೆ. ಸುಂದರ ಪೇಂಟಿಂಗ್ ಗಳನ್ನು ಮಾಡಬಹುದು. ಅಕ್ಕಪಕ್ಕ ಹೊಸ ವಿನ್ಯಾಸದ ದೀಪಗಳನ್ನು ಅಳವಡಿಸಬಹುದು. ಅದುಬಿಟ್ಟು ವಾಹನ ಸವಾರರ ಜೀವ ಪಣಕ್ಕಿಡುವ ಇಂತಹ ಸಾಹಸಗಳು ಸರಿ ಅಲ್ಲ’ ಎಂದು ಸಿವಿಲ್ ಎಂಜಿನಿಯರ್ ಸಂಸ್ಥೆ ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್. ಚನ್ನಾಳ್ ಸಲಹೆ ಮಾಡುತ್ತಾರೆ.
–ವಿಜಯಕುಮಾರ್ ಚಂದರಗಿ