Advertisement

ಭೂಗತ ವಿದ್ಯುತ್‌ ಕೇಬಲ್‌ ಯೋಜನೆ ಪ್ರಸ್ತಾವನೆ

03:58 PM Jul 30, 2022 | Team Udayavani |

ಧಾರವಾಡ: ಹು-ಧಾ ಭೂ ಅಂತರ್ಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ಅಗತ್ಯ ಅನುದಾನ ನೀಡಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ಕವಿಸಂನಲ್ಲಿ ಭಾರತ ಸರ್ಕಾರದ ವಿದ್ಯುತ್‌ ಸಚಿವಾಲಯ, ಇಂಧನ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ವಿದ್ಯುತ್ಛಕ್ತಿ ಪ್ರಸರಣ ನಿಗಮ ನಿಯಮಿತ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್‌ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್‌ ಪರಿವರ್ತಕ ಬ್ಯಾಂಕುಗಳ ಸ್ಥಾಪನೆ ಮೂಲಕ ರೈತರ ಪಂಪ್‌ಸೆಟ್‌ಗಳ ಸಮಸ್ಯೆಗೆ ತ್ವರಿತ ಸ್ಪಂದನೆ ಸಾಧ್ಯವಾಗಿದೆ. ರಸ್ತೆ, ಒಳಚರಂಡಿ, ಮನೆ ಮನೆಗೆ ಕುಡಿಯುವ ನೀರು ಪೂರೈಸುವ ನಳಗಳ ಜೋಡಣೆ ಮೊದಲಾದ ಮೂಲ ಸೌಕರ್ಯಗಳ ಕಾರ್ಯ ದೇಶಾದ್ಯಂತ ಭರದಿಂದ ನಡೆಯುತ್ತಿವೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಈವರೆಗೆ ವಿದ್ಯುತ್‌ ಸಂಪರ್ಕವೇ ಇಲ್ಲದಿದ್ದ 30 ಹಳ್ಳಿಗಳಿಗೆ ವಿದ್ಯುತ್‌ ಪೂರೈಸಲಾಗುತ್ತಿದೆ. ಸೌಭಾಗ್ಯ ಯೋಜನೆಯಡಿ ಹೆಚ್ಚು ದಾಖಲೆಗಳನ್ನು ಗ್ರಾಹಕರಿಂದ ಪಡೆಯದೇ ಆಧಾರ್‌ ಕಾರ್ಡ್‌ ಪಡೆದು ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಜನ ಮನ್ನಣೆಗಳಿಸಿದೆ ಎಂದರು.

ಕಲ್ಲಿದ್ದಲು ಗಣಿಗಳ ಸಮರ್ಪಕ ಬಳಕೆಯಿಂದ ದೇಶದಲ್ಲಿ ವಿದ್ಯುತ್‌ ಸ್ವಾವಲಂಬನೆ ಸಾಧ್ಯವಾಗಿದೆ. ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ನಡೆದ ಅಕ್ರಮ ತಡೆದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿದ್ಯುತ್‌ ಸ್ವಾವಲಂಬಿಯಾಗಿಸಲು ಸಾಧ್ಯವಾಗಿದೆ. ದೇಶದಲ್ಲಿ ಹೇರಳವಾಗಿ ಕಲ್ಲಿದ್ದಲು ಸಂಪನ್ಮೂಲವಿದ್ದು, ಈ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ನೆರೆ ದೇಶಗಳಿಗೂ ವಿದ್ಯುತ್‌ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ. ಮಾತನಾಡಿ, ನೀರಾವರಿ ಪಂಪ್‌ಸೆಟ್‌ ಹೊಂದಿರುವ ರೈತರು ಎದುರಿಸುತ್ತಿದ್ದ ವಿದ್ಯುತ್‌ ಪರಿವರ್ತಕಗಳ ಸಮಸ್ಯೆ ನಿವಾರಿಸಲು ಟಿ.ಸಿ.ಬ್ಯಾಂಕ್‌ಗಳ ಮೂಲಕ ಕೃಷಿಕರಿಗೆ ತ್ವರಿತ ಸ್ಪಂದನೆ ನೀಡಲಾಗುತ್ತಿದೆ. ಗ್ರಾಮೀಣ ಭಾಗಕ್ಕೆ ಹೆಸ್ಕಾಂ ಅಧಿಕಾರಿಗಳು ಪ್ರತಿ ತಿಂಗಳು ಮೂರನೇ ಶನಿವಾರ ಭೇಟಿ ನೀಡಿ ವಿದ್ಯುತ್‌ ಅದಾಲತ್‌ ಮೂಲಕ ಜನಸ್ಪಂದನೆ ನೀಡಿ ಇಂಧನ ಇಲಾಖೆಯನ್ನು ಗ್ರಾಹಕ ಹಾಗೂ ಜನಸ್ನೇಹಿಯನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

Advertisement

ಹೆಸ್ಕಾಂ ಅಧಿಕಾರೇತರ ನಿರ್ದೇಶಕ ಸುನೀಲ ಸರೂರ ಮಾತನಾಡಿದರು.

ಪ್ರಕಾಶ ಪಾಟೀಲ, ರಮೇಶ ಬೆಂಡಿಗೇರಿ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ವಿನಾಯಕ ಪಾಲನಕರ್‌, ವೆಂಕಟರೆಡ್ಡಿ, ವಿಚಕ್ಷಣಾ ದಳದ ಎಸ್‌.ಪಿ.ಶಂಕರ ಮಾರಿಹಾಳ ಇದ್ದರು.

ಕಿರುಚಿತ್ರಗಳ ಪ್ರದರ್ಶನ: ಗ್ರಾಮ ವಿದ್ಯುದೀಕರಣ, ಮನೆಗಳ ವಿದ್ಯುದೀಕರಣ ಜಾಗತಿಕ ಅವಕಾಶಗಳ ಕುರಿತು ಕಿರುಚಿತ್ರ; ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುವುದು, ಒಂದೇ ರಾಷ್ಟ್ರ ಒಂದೇ ವಿದ್ಯುತ್‌ ಜಾಲ ಸಾಕ್ಷ್ಯಚಿತ್ರ ಪ್ರದರ್ಶನ; ವಿತರಣಾ ಜಾಲ ಬಲಪಡಿಸುವುದು, ನವೀಕರಿಸಬಹುದಾದ ಇಂಧನ ಉತ್ಪಾದನೆ, ಗ್ರಾಹಕರ ಹಕ್ಕುಗಳ ಕುರಿತು ಕಿರುಚಿತ್ರ ಪ್ರದರ್ಶನ; ವಿದ್ಯುತ್‌ ಉಳಿತಾಯ ಹಾಗೂ ಕುಸುಮ ಯೋಜನೆಗಳ ಬಗ್ಗೆ ನುಕ್ಕಡ ನಾಟಕಗಳ ಪ್ರದರ್ಶನ ಹಾಗೂ ಫಲಾನುಭವಿಗಳ ಅನಿಸಿಕೆಗಳು ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next