Advertisement
ನಾನು ಕಲ್ಯಾಣಪುರದ ಪ್ರತಿಷ್ಠಿತ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿನಿ. ನಮ್ಮ ಕ್ಯಾಂಪಸ್ಸಿನ ಹೃದಯ ಭಾಗದಲ್ಲಿ ಒಂದು ಮಾವಿನ ಮರವಿದೆ. ನಾನು ನನ್ನ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮಿಲಾಗ್ರಿಸ್ ಕಾಲೇಜು ಸೇರಿದ ಆರಂಭದಲ್ಲಿ ಈ ಮರದ ಕೆಳಗೆ ಕಟ್ಟೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವುದನ್ನು ನೋಡಿದ್ದೆ. ಅದೊಂದು ದಿನ ಎಲ್ಲರೂ ಇವತ್ತು Under the mango tree, Under the mango tree ಎಂದು ಖುಷಿಯಿಂದ ಮಾತಾಡುವುದು ಕಂಡಿತು. “ಇದೇನಪ್ಪಾ… ಮರದ ಕೆಳಗೆ ಕೂತುಕೊಳ್ಳುವುದರಲ್ಲೂ ಇಷ್ಟು ಆಸಕ್ತಿ?’ ಎಂದು ನಾನಂದುಕೊಂಡೆ. ಆದರೂ ಅದೇನಿರಬಹುದು ಎಂದು ಗೊತ್ತಾಗಲಿಲ್ಲ.
ಮಿಲಾಗ್ರಿಸ್ ಕಾಲೇಜಿನಲ್ಲಿ ಬಹಳ ಹಿಂದಿನಿಂದಲೂ ಮಧ್ಯಾಹ್ನದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುವ Under the Mango Tree ಚಟುವಟಿಕೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳೆಲ್ಲ ಬೇಗ ಊಟ ಮುಗಿಸಿ ಲಗುಬಗೆಯಿಂದ ಮರದಡಿ ಸೇರಿ ಬರುತ್ತಾರೆ. ಹೆಚ್ಚಾಗಿ ಕಾಲೇಜಿನ ಸಾಹಿತ್ಯ ಸಂಘದ ಮುಂದಾಳುತ್ವದಲ್ಲಿ ಇಲ್ಲಿ ನಡೆಯುವ ಚಟುವಟಿಕೆಗಳ ಜೊತೆಗೆ ಐಖ ಕ್ಲಬ…, ವಿಜ್ಞಾನ ಸಂಘದ ಕಾರ್ಯಕ್ರಮಗಳೂ ಕೆಲವೊಮ್ಮೆ ನಡೆಯುತ್ತವೆ. ಮರದಡಿಯಲ್ಲಿ ನಡೆಯುವ ರಸಪ್ರಶ್ನೆ ಹಾಗೂ ಇನ್ನೂ ಕೆಲವು ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಖುಷಿಕೊಟ್ಟರೆ, ಯಾವುದಾದರೊಂದು ಹೊಸ ವಿಷಯದ ಕುರಿತಾದ ಚರ್ಚೆ, ಹಾಡು, ಕವನವಾಚನ ಇನ್ನಿತ್ಯಾದಿಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗುತ್ತಿದೆ. ಇತ್ತೀಚೆಗಿನ ಕೆಲವು ಸಮಯದಿಂದ ಬುಧವಾರದಂದು ಮಧ್ಯಾಹ್ನ ಒಂದು ಗಂಟೆಯಿಂದ ಒಂದೂವರೆಯವರೆಗೆ ನಡೆಯುವ ಈ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳ ಮುಖಾಂತರ ಬಿಡುವಿನ ಸಮಯ ಸದುಪಯೋಗಪಡಿಸಿಕೊಳ್ಳುವುದಷ್ಟೇ ಅಲ್ಲ, ಆ ಮೂಲಕ ಪರಿಸರದೊಂದಿಗೆ ಒಂದಾಗಿ ಬಾಳುತ್ತಿದ್ದಾರೆ. ಹೆಚ್ಚಾಗಿ ಹರಟೆ, ಗಾಸಿಪ್ ಮುಂತಾದ ಟೈಮ್‌ಪಾಸ್ ಮಾತುಗಳಿಗಷ್ಟೇ ಸೀಮಿತವಾಗುವ ಕ್ಯಾಂಪಸ್ಸಿನೊಳಗಿನ ಮರದ ಕಟ್ಟೆಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆನ್ನುವುದಕ್ಕೆ ನಮ್ಮ ಕಾಲೇಜಿನ ಈ ಪ್ರಯೋಗವೇ ಸಾಕ್ಷಿ.
Related Articles
ತೃತೀಯ ಬಿ.ಎಸ್ಸಿ ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ
Advertisement