Advertisement

ಅಂಡರ್‌-17 ಫ‌ುಟ್‌ಬಾಲ್‌ ಕಾಲ್ಚೆಂಡಿನ ಸಮರಕ್ಕೆ ಸೆಮಿ ಸ್ಪರ್ಶ

07:20 AM Oct 25, 2017 | Team Udayavani |

ಕೋಲ್ಕತಾ/ಮುಂಬಯಿ: ಕಿರಿಯರ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ಸೆಮಿಫೈನಲ್‌ ಹಂತಕ್ಕೆ ದಾಪುಗಾಲಿಕ್ಕಿದೆ. ಬುಧವಾರ ಎರಡೂ ಉಪಾಂತ್ಯ ಪಂದ್ಯಗಳು ನಡೆಯಲಿದ್ದು, ಕೋಲ್ಕತಾದಲ್ಲಿ ಬ್ರಝಿಲ್‌-ಇಂಗ್ಲೆಂಡ್‌, ಮುಂಬಯಿಯಲ್ಲಿ ಸ್ಪೇನ್‌-ಮಾಲಿ ಪರಸ್ಪರ ಎದುರಾಗಲಿವೆ. ಪ್ರಶಸ್ತಿ ಸುತ್ತಿನ ಪ್ರವೇಶಕ್ಕೆ ಜಿದ್ದಾಜಿದ್ದಿ ಹೋರಾಟ ನಡೆಯುವ ಎಲ್ಲ ಸಾಧ್ಯತೆಗಳಿವೆ.

Advertisement

ಈ 4 ಸೆಮಿಫೈನಲ್‌ ತಂಡಗಳಲ್ಲಿ ಈವರೆಗೆ ಚಾಂಪಿಯನ್‌ ಆಗಿ ಮೂಡಿಬಂದ ತಂಡ ಕೇವಲ ಬ್ರಝಿಲ್‌ ಮಾತ್ರ. ಅದು 3 ಸಲ ಪ್ರಶಸ್ತಿ ಎತ್ತಿದೆ. ಈ ಸಲವೂ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅದು ಜರ್ಮನಿಯನ್ನು 2-1 ಅಂತರದಿಂದ ಮಣಿಸಿತ್ತು. ಆದರೆ ಈ ಗೆಲುವು ಬ್ರಝಿಲಿಯನ್ನರ ಛಾತಿಗೆ ತಕ್ಕಂತೆ ಇರಲಿಲ್ಲ. ಗೆಲುವಿನ ಗೋಲಿಗಾಗಿ ಅದು 70ನೇ ನಿಮಿಷದ ತನಕ ಕಾಯಬೇಕಾಗಿ ಬಂದಿತ್ತು. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ 4-1 ಗೋಲುಗಳಿಂದ ಅಮೆರಿಕವನ್ನು ಕೂಟದಿಂದ ಹೊರದಬ್ಬಿತ್ತು. 

60 ಸಾವಿರ ವೀಕ್ಷಕರು!
ಇಂಗ್ಲೆಂಡ್‌ ವಿರುದ್ಧ ಹೋರಾಡುವಾಗ ಬ್ರಝಿಲ್‌ ಕ್ವಾರ್ಟರ್‌ ಫೈನಲ್‌ಗ‌ೂ ಮಿಗಿ ಲಾದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ. ಕೊನೆಯ ಗಳಿಗೆಯಲ್ಲಿ ಈ ಪಂದ್ಯವನ್ನು ಗುವಾಹಟಿಯಿಂದ ಕೋಲ್ಕತಾಕ್ಕೆ ವರ್ಗಾಯಿಸಿದ್ದರಿಂದ ಸಹಜವಾಗಿಯೇ ಎರಡೂ ತಂಡಗಳಿಗೆ ಕಿರಿಕಿರಿ ಆಗಿರುವುದು ಸುಳ್ಳಲ್ಲ. ಆದರೆ “ಸಾಲ್ಟ್ ಲೇಕ್‌ ಸ್ಟೇಡಿಯಂ’ನಲ್ಲಿ ಜಮಾಯಿಸುವ 60 ಸಾವಿರ ವೀಕ್ಷಕರು ಈ ಪಂದ್ಯವನ್ನು ಭಾರೀ ಸಂಭ್ರಮದಿಂದ ಆಸ್ವಾದಿಸುವುದರಲ್ಲಿ ಅನುಮಾನವಿಲ್ಲ. ಫ‌ುಟ್‌ಬಾಲ್‌ ದಂತಕತೆ ಪೀಲೆ 1977ರಲ್ಲಿ ಕೋಲ್ಕತಾಕ್ಕೆ ಭೇಟಿ ನೀಡಿದ ಬಳಿಕ ಇಲ್ಲಿನ ಫ‌ುಟ್‌ಬಾಲ್‌ ಅಭಿಮಾನಿಗಳು ಬ್ರಝಿಲ್‌ ಪರ ಹೆಚ್ಚಿನ ಒಲವು ಹೊಂದಿದ್ದಾರೆ.

ಬ್ರಝಿಲ್‌ಗೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಸಾಲ್ಟ್ ಲೇಕ್‌ ಸ್ಟೇಡಿಯಂ ಜತೆ ಗಾಢ ಸಂಬಂಧ ಹೊಂದಿದೆ. 3 ಗ್ರೂಪ್‌ ಪಂದ್ಯ, ಪ್ರೀ-ಕ್ವಾರ್ಟರ್‌ ಫೈನಲ್‌ ಹಾಗೂ ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಅದು ಇಲ್ಲಿಯೇ ಆಡಿರುವುದರಿಂದ ಬ್ರಝಿಲ್‌ಗೆ ಜಬರ್ದಸ್ತ್ ಪೈಪೋಟಿಯೊಡ್ಡುವುದು ಖಚಿತ.

ರಕ್ಷಣೆ ಹಾಗೂ ಗೋಲ್‌ ಕೀಪಿಂಗ್‌ನಲ್ಲಿ ಬ್ರಝಿಲ್‌ ಹೆಚ್ಚು ಶಕ್ತಿಶಾಲಿಯಾಗಿದೆ. ಗೋಲ್‌ ಕೀಪರ್‌ ಗ್ಯಾಬ್ರಿಯಲ್‌ ಬ್ರಝಾವೊ ಶೇ. 88.9 ಗೋಲುಗಳ ರಕ್ಷಣೆಯೊಂದಿಗೆ ಈ ಕೂಟದ ನಂ.1 ಕೀಪರ್‌ ಆಗಿದ್ದಾರೆ.

Advertisement

ಇಂಗ್ಲೆಂಡ್‌ ಫಾರ್ವರ್ಡ್‌ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಈ ಕೂಟದ 5 ಪಂದ್ಯಗಳಲ್ಲಿ ಆಂಗ್ಲರ ಫಾರ್ವರ್ಡ್‌ ಆಟಗಾರರೇ 15 ಗೋಲು ಸಿಡಿಸಿದ್ದಾರೆ. ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಕ್ಲಬ್‌ಗಳ ಅಗ್ರಮಾನ್ಯ ಆಟಗಾರರು ಈ ತಂಡದಲ್ಲಿರುವುದೊಂದು ಪ್ಲಸ್‌ ಪಾಯಿಂಟ್‌.

ಮಾಲಿಗೆ ಕಾದಿದೆಯೇ ಗೆಲುವಿನ ಮಾಲೆ?
ಮಾಲಿ ಕಳೆದ ಸಲದ ರನ್ನರ್ ಅಪ್‌ ತಂಡ. ಫೈನಲ್‌ನಲ್ಲಿ ಅದು ನೈಜೀರಿಯಾಕ್ಕೆ 2-0 ಗೋಲುಗಳಿಂದ ಸೋತಿತ್ತು. ಅಂದು ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ವಶಪಡಿಸಿಕೊಳ್ಳುವುದು ಆಫ್ರಿಕನ್‌ ಚಾಂಪಿಯನ್‌ ತಂಡದ ಗುರಿ. ಎದುರಾಳಿ 3 ಬಾರಿಯ ಯೂರೋ ಅಂಡರ್‌-17 ಚಾಂಪಿಯನ್‌ ಖ್ಯಾತಿಯ ಸ್ಪೇನ್‌. 

ಮಾಲಿ ಅತ್ಯಂತ ಆಕ್ರಮಣಕಾರಿ ಆಟದಿಂದಲೇ ಇಲ್ಲಿಯ ತನಕ ಮುನ್ನುಗ್ಗಿ ಬಂದಿದೆ. ಸೆಮಿಯಲ್ಲೂ ಅದು ತನ್ನ ಶೈಲಿಯನ್ನು ಬದಲಿಸಿಕೊಳ್ಳುವ ಸಾಧ್ಯತೆ ಇಲ್ಲ. ಕೂಟದಲ್ಲೇ ಗರಿಷ್ಠ 128 ಗೋಲುಗಳ ಪ್ರಯತ್ನ ನಡೆಸಿದ್ದು ಮಾಲಿ ಆಕ್ರಮಣಕ್ಕೆ ಸಾಕ್ಷಿ. ಸ್ಪೇನ್‌ ಟಿಕಿ-ಟಾಕ (ಶಾರ್ಟ್‌ ಪಾಸಿಂಗ್‌) ಆಟಕ್ಕೆ ಹೆಸರುವಾಸಿ. ಎರಡೂ ತಂಡಗಳು ಲೀಗ್‌ ಹಂತದ ಆರಂಭದ ಪಂದ್ಯದಲ್ಲೇ ಸೋತು ಈ ಹಂತಕ್ಕೆ ಬಂದಿವೆ. 

ಮಾಲಿ ಗ್ರೂಪ್‌ ಹಂತದ 2 ಪಂದ್ಯಗಳನ್ನು ಮುಂಬಯಿಯ ಡಿ.ವೈ. ಪಾಟೀಲ್‌ ಸ್ಟೇಡಿಯಂನಲ್ಲೇ ಆಡಿದೆ. ಮಾಲಿಯ ಈ ಎರಡೂ ಪಂದ್ಯಗಳ ವೇಳೆ ಮಳೆ ಎದುರಾಗಿತ್ತು. ಆದರೂ ಒದ್ದೆ ಅಂಗಳದಲ್ಲಿ ಮಾಲಿ ಮಿಂಚಿನ ಆಟವಾಡಿತ್ತು. ಈಗ ಮಳೆ ದೂರಾಗಿದೆ. ಮಾಲಿ ಇನ್ನಷ್ಟು ಅಪಾಯಕಾರಿ ಆಗಲೂಬಹುದು.

ಸ್ಟ್ರೈಕರ್‌ ರಿಝ್ ಸ್ಪೇನ್‌ನ ಸ್ಟಾರ್‌ ಆಟಗಾರ. ಕೂಟದಲ್ಲಿ ಈಗಾಗಲೇ 4 ಗೋಲು ಹೊಡೆದಿದ್ದು, ಇದರಲ್ಲೊಂದು ಗೋಲು ಕ್ವಾರ್ಟರ್‌ ಫೈನಲ್‌ನಲ್ಲಿ ಬಂದಿದೆ. ಮಾಲಿ ವಿರುದ್ಧ ಅಬೆಲ್‌ ರಿಝ್ ಹಾಗೂ ಸರ್ಗಿ ಗೋಮೆಜ್‌ ಪಾತ್ರ ನಿರ್ಣಾಯಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next