Advertisement

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

12:23 PM Sep 01, 2024 | Team Udayavani |

ಕ್ಯಾನ್ಸರ್‌ ಕಾಯಿಲೆಯ ಅನೇಕ ಲಕ್ಷಣಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂಥವೇ ಆಗಿವೆ. ಆದರೆ ಸಾಮಾನ್ಯವಲ್ಲದ ಕೆಲವು ಲಕ್ಷಣಗಳನ್ನು ಗುರುತಿಸಲು ಅನೇಕ ಬಾರಿ ಕಷ್ಟವಾಗಬಹುದು. ವಿವಿಧ ವಿಧವಾದ ಕ್ಯಾನ್ಸರ್‌ಗಳ ಜತೆಗೆ ಸಂಬಂಧ ಹೊಂದಿರಬಹುದಾದ ಕೆಲವು ಅಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳನ್ನು ಈ ಕೆಳಗೆ ವಿವರಿಸಲಾಗಿದೆ.

Advertisement

  1. ಸತತ ಕೆಮ್ಮು ಅಥವಾ ಗಡುಸಾದ ಸ್ವರ: ಇದು ಸಾಮಾನ್ಯವಾಗಿ ಶ್ವಾಸಕೋಶ ಅಥವಾ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಜತೆಗೆ ಸಂಬಂಧ ಹೊಂದಿರುತ್ತದೆ.
  2. ನುಂಗಲು ಕಷ್ಟವಾಗುವುದು: ಅನ್ನನಾಳ ಅಥವಾ ಗಂಟಲಿನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
  3. ವಿವರಿಸಲಾಗದ, ನಿರ್ದಿಷ್ಟ ಕಾರಣವಿಲ್ಲದ ದೇಹತೂಕ ನಷ್ಟ: ಇದು ಮೇದೋಜೀರಕ ಗ್ರಂಥಿ, ಜಠರ, ಅನ್ನನಾಳ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಸಹಿತ ಅನೇಕ ವಿಧವಾದ ಕ್ಯಾನ್ಸರ್‌ಗಳ ಜತೆಗೆ ಸಂಬಂಧ ಹೊಂದಿರಬಹುದು.
  4. ದೀರ್ಘ‌ಕಾಲೀನ ದಣಿವು: ಸಾಕಷ್ಟು ವಿಶ್ರಾಂತಿ ಪಡೆದರೂ ಕೂಡ ಕಡಿಮೆಯಾಗದ ತೀವ್ರ ತರಹದ ದಣಿವು ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ), ಕರುಳು ಅಥವಾ ಜಠರದ ಕ್ಯಾನ್ಸರ್‌ ಜತೆಗೆ ಸಂಬಂಧ ಹೊಂದಿರಬಹುದಾಗಿದೆ.
  5. ಸತತ ತುರಿಕೆ: ತುರಿಕೆ ಅದರಲ್ಲೂ ದೇಹದ ಕೆಳಭಾಗದಲ್ಲಿ ಸತತವಾಗಿ ಕಂಡುಬರುತ್ತಿದ್ದರೆ ಕೆಲವೊಮ್ಮೆ ಅದು ಲಿಂಫೋಮಾದ ಲಕ್ಷಣವಾಗಿರಬಹುದು.
  6. ವಿವರಿಸಲಾಗದ ನೋವು: ಬೆನ್ನುನೋವು (ಇದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು) ಅಥವಾ ಎಲುಬು ನೋವು (ಎಲುಬಿನ ಕ್ಯಾನ್ಸರ್‌ ಲಕ್ಷಣವಾಗಿರಬಹುದು) ಗಳಂತಹ ಕೆಲವು ನಿರ್ದಿಷ್ಟ ದೇಹಭಾಗಗಳಲ್ಲಿ ನೋವು ಆಯಾ ಭಾಗದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
  7. ಚರ್ಮದಲ್ಲಿ ಬದಲಾವಣೆ: ಚರ್ಮದ ಬಣ್ಣ ಗಾಢವಾಗುವುದು (ಹೈಪರ್‌ ಪಿಗ್ಮೆಂಟೇಶನ್‌), ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು (ಜಾಂಡಿಸ್‌), ಚರ್ಮ ಕೆಂಪಗಾಗುವದು (ಎರಿತ್ಮಿಯಾ), ತುರಿಕೆ ಅಥವಾ ಅತಿಯಾದ ಕೂದಲು ಬೆಳವಣಿಗೆ ಕೂಡ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
  8. ಜ್ವರ: ಸೋಂಕುಗಳ ಜತೆಗೆ ಸಂಬಂಧ ಹೊಂದಿಲ್ಲದೆ ಆಗಾಗ ಕಾಣಿಸಿಕೊಳ್ಳುವ ಜ್ವರ ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ) ಅಥವಾ ಲಿಂಫೋಮಾದ ಲಕ್ಷಣವಾಗಿರಬಹುದು.
  9. ಅಸಹಜ ರಕ್ತಸ್ರಾವ ಅಥವಾ ಸ್ರಾವ: ಮೂತ್ರದಲ್ಲಿ ರಕ್ತ (ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್‌), ಮಲದಲ್ಲಿ ರಕ್ತ (ಕರುಳು ಅಥವಾ ಗುದದ್ವಾರದ ಕ್ಯಾನ್ಸರ್‌) ಅಥವಾ ಯೋನಿಯ ಮೂಲಕ ಅಸಹಜ ರಕ್ತಸ್ರಾವ (ಎಂಡೊಮೆಟ್ರಿಯಲ್‌ ಯಾ ಗರ್ಭಕಂಠದ ಕ್ಯಾನ್ಸರ್‌).
  10. ನರಶಾಸ್ತ್ರೀಯ ಲಕ್ಷಣಗಳು: ಮೂರ್ಛೆ ತಪ್ಪುವುದು, ದೃಷ್ಟಿಯಲ್ಲಿ ಬದಲಾವಣೆ, ಸತತವಾದ ತಲೆನೋವು ಅಥವಾ ಇತರ ನರಶಾಸ್ತ್ರೀಯ ಸಮಸ್ಯೆಗಳು ಮೆದುಳಿನ ಗಡ್ಡೆಗಳ ಲಕ್ಷಣಗಳಾಗಿರಬಹುದು.
  11. ಹೊಟ್ಟೆಯುಬ್ಬರ ಅಥವಾ ಹೊಟ್ಟೆ ಊದಿಕೊಳ್ಳುವುದು: ಇದು ಕೆಲವೊಮ್ಮೆ ಗರ್ಭಕೋಶದ ಕ್ಯಾನ್ಸರ್‌ ಜತೆಗೆ ಸಂಬಂಧ ಹೊಂದಿರುತ್ತದೆ.
  12. ಸ್ತನದಲ್ಲಿ ಬದಲಾವಣೆಗಳು: ಗಡ್ಡೆಗಳು, ಗಂಟುಗಳ ಜತೆಗೆ ಮೊಲೆತೊಟ್ಟಿನಿಂದ ಸ್ರಾವ, ಗುಳಿ ಬೀಳುವುದು ಅಥವಾ ಚರ್ಮದ ವಿಧದಲ್ಲಿ ಬದಲಾವಣೆಗಳು ಸ್ತನ ಕ್ಯಾನ್ಸರ್‌ನ ಮುನ್ಸೂಚನೆಯನ್ನು ನೀಡಬಹುದಾಗಿದೆ.

ಈ ಯಾವುದೇ ಲಕ್ಷಣಗಳು ಕಂಡುಬಂದಿದ್ದರೆ ಅಥವಾ ದೀರ್ಘ‌ಕಾಲದಿಂದ ಇದ್ದು ಉಲ್ಬಣಗೊಳ್ಳುತ್ತ ಹೋಗುತ್ತಿದ್ದರೆ ಸರಿಯಾದ ರೋಗಪತ್ತೆಗಾಗಿ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ, ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ.

ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸುವ ಆಹಾರಗಳು ಕೆಲವು ಆಹಾರಗಳು ಮತ್ತು ಆಹಾರ ಶೈಲಿಗಳಿಗೂ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುವುದಕ್ಕೂ ಪರಸ್ಪರ ಸಂಬಂಧ ಇರುತ್ತದೆ. ಈ ಕೆಳಗೆ ಅಂತಹ ಕೆಲವು ಆಹಾರಗಳು ಮತ್ತು ಆಹಾರ ಶೈಲಿಗಳನ್ನು ವಿವರಿಸಲಾಗಿದೆ.

Advertisement

  1. ಸಂಸ್ಕರಿತ ಮಾಂಸಾಹಾರ: ಬೇಕನ್‌, ಸಾಸೇಜ್‌ ಗಳು, ಹಾಟ್‌ ಡಾಗ್‌ಗಳು ಮತ್ತು ಡೇಲಿ ಮೀಟ್‌ ಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಗ್ರೂಪ್‌ 1 ಕಾರ್ಸಿನೋಜೆನಿಕ್‌ ಎಂದು ವರ್ಗೀಕೃತಗೊಂಡಿವೆ. ಇವು ಕೊಲೊರೆಕ್ಟಲ್‌ ಕ್ಯಾನ್ಸರ್‌ ಉಂಟು ಮಾಡುವ ಅಪಾಯ ಹೊಂದಿರುವುದೇ ಇದಕ್ಕೆ ಕಾರಣ.
  2. ಕೆಂಪು ಮಾಂಸ: ಭಾರೀ ಪ್ರಮಾಣದಲ್ಲಿ ಕೆಂಪು ಮಾಂಸ (ಬೀಫ್, ಪೋರ್ಕ್‌, ಕುರಿ/ ಮೇಕೆ ಮಾಂಸ) ಸೇವಿಸುವುದರಿಂದ ಕೊಲೊರೆಕ್ಟಲ್‌, ಮೇದೋಜೀರಕ ಗ್ರಂಥಿ ಮತ್ತು ಪ್ರೋಸ್ಟೇಟ್‌ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುತ್ತದೆ.
  3. ಮದ್ಯಪಾನ: ಅತಿಯಾದ ಮದ್ಯಪಾನಕ್ಕೂ ಬಾಯಿ, ಗಂಟಲು, ಅನ್ನನಾಳ, ಪಿತ್ತಕೋಶ, ಸ್ತನ ಮತ್ತು ಕರುಳಿನ ಕ್ಯಾನ್ಸರ್‌ ಉಂಟಾಗುವುದಕ್ಕೂ ಸಂಬಂಧ ಇದೆ.
  4. ಸಕ್ಕರೆ ಭರಿತ ಪೇಯಗಳು ಮತ್ತು ಆಹಾರಗಳು: ಸಕ್ಕರೆ ಭರಿತ ಪಾನೀಯಗಳು, ಪೇಯಗಳು ಮತ್ತು ಆಹಾರ ವಸ್ತುಗಳನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು ಉಂಟಾಗಬಹುದಾಗಿದೆ. ಇದರಿಂದ ಸ್ತನ, ಪಿತ್ತಕೋಶ ಮತ್ತು ಕೊಲೊರೆಕ್ಟಲ್‌ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುತ್ತದೆ.
  5. ಉಪ್ಪು ಬೆರೆಸಿದ, ಉಪ್ಪಿನಲ್ಲಿ ಸಂರಕ್ಷಿಸಿಟ್ಟ ಆಹಾರಗಳು: ಉಪ್ಪಿನಲ್ಲಿ ಸಂಸ್ಕರಿಸಿದ, ಉಪ್ಪೂರಿದ ಆಹಾರವಸ್ತುಗಳಾದ ಉಪ್ಪಿನಕಾಯಿಗಳು, ಸಾಲ್ಟೆಡ್‌ ಮೀನು ಇತ್ಯಾದಿಗಳ ಅತಿಯಾದ ಬಳಕೆಗೂ ಜಠರದ ಕ್ಯಾನ್ಸರ್‌ಗೂ ಸಂಬಂಧ ಇದೆ.
  6. ಗ್ರಿಲ್ಡ್‌, ಫ್ರೈಡ್‌ ಮತ್ತು ಬ್ರಾಯಿಲ್ಡ್‌ ಆಹಾರಗಳು: ಗ್ರಿಲಿಂಗ್‌, ಹುರಿಯುವುದು ಇತ್ಯಾದಿಯಾಗಿ ಮಾಂಸಾಹಾರಗಳನ್ನು ಅತಿಯಾದ ಉಷ್ಣತೆಯಲ್ಲಿ ಅಡುಗೆ ಮಾಡುವುದರಿಂದ ಹಿಟೆರೊಸೈಕ್ಲಿಕ್‌ ಅಮೈನ್‌ಗಳು (ಎಚ್‌ಸಿಎಗಳು) ಮತ್ತು ಪಾಲಿಸೈಕ್ಲಿಕ್‌ ಅರೊಮ್ಯಾಟಿಕ್‌ ಹೈಡ್ರೊಕಾರ್ಬನ್‌ಗಳು (ಪಿಎಚ್‌ ಎಗಳು) ಉತ್ಪಾದನೆಯಾಗುತ್ತವೆ. ಇವುಗಳು ಕ್ಯಾನ್ಸರ್‌ ಅಪಾಯ ಹೆಚ್ಚಳದ ಜತೆಗೆ ಸಂಬಂಧ ಹೊಂದಿವೆ.
  7. ಅತಿಯಾಗಿ ಸಂಸ್ಕರಿಸಿದ ಆಹಾರವಸ್ತುಗಳು: ಸಂಸ್ಕರಿತ ಸಕ್ಕರೆ, ಅನಾರೋಗ್ಯಕರ ಕೊಬ್ಬುಗಳು ಮತ್ತು ಕೃತಕ ಬೆರಕೆ ವಸ್ತುಗಳು ಅಧಿಕ ಪ್ರಮಾಣದಲ್ಲಿ ಇರುವ ಆಹಾರಗಳು ಬೊಜ್ಜು ಉಂಟಾಗಲು ಕಾರಣವಾಗಬಹುದಾಗಿದ್ದು, ಕ್ಯಾನ್ಸರ್‌ ಉಂಟಾಗುವುದಕ್ಕೂ ಕೊಡುಗೆ ನೀಡುತ್ತವೆ.
  8. ಟ್ರಾನ್ಸ್‌ ಫ್ಯಾಟ್‌ಗಳು: ಅನೇಕ ಕರಿದ, ಹಬೆಯಲ್ಲಿ ಬೇಯಿಸಿದ ಆಹಾರವಸ್ತುಗಳು, ಸಂಸ್ಕರಿಸಿದ ತಿನಿಸುಗಳಲ್ಲಿ ಕಂಡುಬರುವ ಟ್ರಾನ್ಸ್‌ ಫ್ಯಾಟ್‌ಗಳು ಉರಿಯೂತ ಮತ್ತು ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುವುದಕ್ಕೆ ಕಾರಣವಾಗುತ್ತವೆ.
  9. ಕೃತಕ ಸಿಹಿಕಾರಕಗಳು: ಈ ಬಗೆಗಿನ ಸಾಕ್ಷ್ಯಾಧಾರಗಳು ದೃಢವಾಗಿ ಹೇಳದೆ ಇದ್ದರೂ ಕೆಲವು ಕೃತಕ ಸಿಹಿಕಾರಕಗಳು ಮತ್ತು ಕ್ಯಾನ್ಸರ್‌ ನಡುವೆ ಸಂಬಂಧ ಇರುವುದಾಗಿ ಕೆಲವು ಅಧ್ಯಯನಗಳು ಹೇಳುತ್ತವೆ.
  10. ಮಲಿನಗೊಂಡ ಆಹಾರಗಳು: ಅಫ್ಲಟೊಟಾಕ್ಸಿನ್‌ ಗಳಿಂದ (ಸರಿಯಾಗಿ ದಾಸ್ತಾನು ಮಾಡದ ಧಾನ್ಯಗಳು, ಕಾಳುಗಳು ಮತ್ತು ಬೀಜಗಳು ಹಾಗೂ ಅಚ್ಚುಗಳಿಂದ ಉತ್ಪಾದನೆಯಾಗುತ್ತದೆ) ಅಥವಾ ಇತರ ಕಾರ್ಸಿನೊಜೆನ್‌ಗಳಿಂದ ಮಲಿನಗೊಂಡಿರುವ ಆಹಾರ ವಸ್ತುಗಳಿಂದ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುತ್ತದೆ.

ಹಣ್ಣು ಹಂಪಲುಗಳು, ತರಕಾರಿಗಳು, ಇಡೀ ಧಾನ್ಯಗಳು ಮತ್ತು ಪ್ರೊಟೀನ್‌ಗಳಿಂದ ಸಮತೋಲನಗೊಂಡಿರುವ ಆರೋಗ್ಯಪೂರ್ಣ ಆಹಾರ ಸೇವನೆಯ ಜತೆಗೆ ಮೇಲೆ ಹೇಳಲಾದ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸುವ ಆಹಾರವಸ್ತುಗಳ ಸೇವನೆಯನ್ನು ತ್ಯಜಿಸುವುದು ಅಥವಾ ಕನಿಷ್ಠ ಮಟ್ಟಕ್ಕಿಳಿಸುವ ಮೂಲಕ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

-ಡಾ| ಹರೀಶ್‌ ಇ.,

ಸರ್ಜಿಕಲ್‌ ಆಂಕಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next