Advertisement
ಮತ್ತೂಂದು ಮಳೆಗಾಲ ಹತ್ತಿರವಾಗುತ್ತಿದ್ದರೂ ರಾಜಕಾಲುವೆಗಳ ಸ್ಥಿತಿ ಬದಲಾಗಿಲ್ಲ. ಸರ್ಕಾರ ಹಾಗೂ ಬಿಬಿಎಂಪಿ ತಮ್ಮ ಬಜೆಟ್‌ಗಳಲ್ಲಿ ರಾಜಕಾಲುವೆಗಳಲ್ಲಿನ ಹೂಳು ತೆಗೆಯಲು ಹಾಗೂ ತಡೆಗೋಡೆಗಳ ನಿರ್ಮಾಣ, ದುರಸ್ತಿಗಾಗಿ ನೂರಾರು ಕೋಟಿ ರೂ. ಮೀಸಲಿಡುತ್ತವೆ. ಆದರೂ ಪ್ರತಿ ವರ್ಷ ಮಳೆಗಾಲದಲ್ಲಿ ಕಾಲುವೆಗಳು ಉಕ್ಕುವುದು, ಮನೆಗಳಿಗೆ ನೀರು ನುಗ್ಗಿ ಅನಾಹುತಗಳು ಸಂಭವಿಸುವುದು ಮುಂದುವರಿಯುತ್ತಲೇ ಇದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಳೆ ಬಂದಾಗ ಮನೆ ಗಳಿಗೆ ನೀರು ನುಗ್ಗುವುದು ಪ್ರಮುಖ ವಿಚಾರವೂ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಸುರಿದ ದಾಖಲೆಯ ಮಳೆಗೆ ಹಲವಾರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು.
ವರ್ಷಗಳಿಂದ 146 ಕಿ.ಮೀ. ಉದ್ದದ ಕಾಲುವೆಗಳ ತಡೆಗೋಡೆ ನಿರ್ಮಾಣ, ದುರಸ್ತಿ ಹಾಗೂ 155 ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆಗೆಯುವ ಕೆಲಸಕ್ಕೆ ಟೆಂಡರ್ ನೀಡಲಾಗಿದೆ. ಆದರೆ, ಈವರೆಗೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಲವಾರು ಬಡಾವಣೆಗಳು ಪ್ರವಾಹ ಭೀತಿ ಎದುರಿಸುತ್ತಿರುವುದು ಸುಳ್ಳಲ್ಲ. ರಾಜ್ಯ ಸರ್ಕಾರದಿಂದ ಕಳೆದ ಎರಡು ವರ್ಷಗಳಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ, ದುರಸ್ತಿ ಹಾಗೂ ಹೂಳು ತೆಗೆಯಲು 1100 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಅದರಂತೆ ಆರು ಪ್ಯಾಕೇಜ್‌ಗಳಲ್ಲಿ 146 ಕಿ.ಮೀ. ಉದ್ದದ ರಾಜಕಾಲುವೆ ನಿರ್ಮಾಣಕ್ಕೆ ಟೆಂಡರ್ ನೀಡಿ ವರ್ಷ ಕಳೆದರೂ, ಕಾಮಗಾರಿ ಪ್ರಮಾಣ ಮಾತ್ರ ಶೇ.50ರಷ್ಟು ಮುಟ್ಟಿಲ್ಲ.
Related Articles
ರಾಜಕಾಲುವೆ ಒತ್ತುವರಿಯಿಂದ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸಲು 2016ರ ಆಗಸ್ಟ್‌ನಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಒತ್ತುವರಿಯಲ್ಲಿ ಪ್ರಭಾವಿಗಳ ಹೆಸರು ಕೇಳಿಬರುತ್ತಿದ್ದಂತೆ ಬೆಚ್ಚಿದ ಪಾಲಿಕೆ, ಕೂಡಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಸಮಸ್ಯೆಗೆ ಪರಿಹಾರ ದೊರೆಯದಂತಾಗಿದೆ.
Advertisement
ಪಾಲಿಕೆಯ ಮಾಹಿತಿಯಂತೆ ನಗರದಲ್ಲಿ ಒಟ್ಟು 1,953 ರಾಜಕಾಲುವೆ ಒತ್ತುವರಿ ಪ್ರಕರಣಗಳಿದ್ದು, 2016ಕ್ಕೆ ಮೊದಲೇ 820ಕ್ಕೂ ಹೆಚ್ಚು ಪ್ರಕರಣಗಳಲ್ಲಿನ ಒತ್ತುವರಿಯನ್ನು ಪಾಲಿಕೆ ತೆರವುಗೊಳಿಸಿತ್ತು. ಮುಖ್ಯಮಂತ್ರಿಗಳ ನಿರ್ದೇಶನದ ನಂತರದಲ್ಲಿ 405 ಪ್ರಕರಣಗಳಲ್ಲಿ ಮಾತ್ರ ಒತ್ತುವರಿ ತೆರವು ಕಾರ್ಯಾ ಚರಣೆ ನಡೆಸಿರುವ ಬಿಬಿಎಂಪಿ, ಒತ್ತುವರಿಯಿಂದ ತೀವ್ರ ಸಮಸ್ಯೆಯಾಗುತ್ತಿರುವ ಕಡೆಗಳಲ್ಲಿ ಕಾರ್ಯಾಚರಣೆಗೆ ಮುಂದಾಗಿಲ್ಲ. ಬಹುತೇಕ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಪಾಲಿಕೆ ಮೌನವಹಿಸಿದ್ದು, ಇನ್ನೂ 728 ಪ್ರಕರಣಗಳಲ್ಲಿ ಒತ್ತುವರಿ ತೆರವು ಬಾಕಿಯಿದೆ.
ಇಲ್ಲಿ ಬೇಕಿದೆ ತುರ್ತು ಕಾಮಗಾರಿ ಹೊಸಕೆರೆಹಳ್ಳಿಯ ಮುನೇಶ್ವರನಗರ, ಎಚ್ ಎಸ್‌ಆರ್ ಬಡಾವಣೆಯ 4, 6 ಮತ್ತು 7ನೇ ಸೆಕ್ಟರ್, ಕೋರಮಂಗಲ 4ನೇ ಟಿ ಬ್ಲಾಕ್, ಉದಯನಗರ, ಬಾಣಸವಾಡಿ, ಕೆ.ಆರ್.ಪುರಂ,ಅಗ್ರಹಾರ ದಾಸರಹಳ್ಳಿ, ಬಿಳೇಕಹಳ್ಳಿ, ಕೆಎಸ್ ಆರ್‌ಟಿಸಿ ಡಿಪೋ, ವಿಶ್ವಪ್ರಿಯ ಬಡಾವಣೆ, ಗಾರೆಬಾವಿಪಾಳ್ಯ, ಸರ್ವಜ್ಞನಗರ, ದೇವಸಂದ್ರ, ಬಿಟಿಎಂ ಬಡಾವಣೆ ಹೀಗೆ ನಗರದ ಹಲವಾರು ಪ್ರಮುಖ ಭಾಗಗಳಲ್ಲಿ ತುರ್ತು ರಾಜಕಾಲುವೆ ಕೆಲಸಗಳು ಆಗಬೇಕಿವೆ.
ವೆಂ.ಸುನೀಲ್‌ಕುಮಾರ್