Advertisement

ಮೂರು ರಾಜ್ಯಗಳಲ್ಲಿ ನಿಲ್ಲದ ಸಮರ; ಗವರ್ನರ್‌ ವರ್ಸಸ್‌ ಸ್ಟೇಟ್‌

08:52 PM Nov 09, 2022 | Team Udayavani |

ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಸಮರ ಬಿರುಸಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಕೇರಳಗಳಲ್ಲಿ ರಾಜ್ಯಪಾಲರ ವಿರುದ್ಧವೇ ಪ್ರಬಲವಾಗಿರುವ ಆಕ್ಷೇಪಗಳನ್ನು ಆಯಾ ಸರ್ಕಾರಗಳು ಮಾಡುತ್ತಿವೆ.

Advertisement

ರಾಜ್ಯಪಾಲರ ವಜಾ ಮಾಡಿ: ರಾಷ್ಟ್ರಪತಿಗೆ ಮನವಿ
ತಮಿಳುನಾಡಿನ ರಾಜ್ಯಪಾಲ ಕೆ.ಎನ್‌.ರವಿ ಅವರಿಂದ “ಶಾಂತಿಗೆ ಧಕ್ಕೆ’ ಎಂದು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ. ಜತೆಗೆ ಅವರನ್ನು ಕೂಡಲೇ ವಜಾಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ. “2021ರಿಂದ ಇದುವರೆಗೆ 20 ವಿಧೇಯಕಗಳಿಗೆ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರಕ್ಕೆ ಅಧಿಕಾರ ನಡೆಸಲು ರಾಜ್ಯಪಾಲರು ಅವಕಾಶ ಕೊಡುತ್ತಿಲ್ಲ’ ಎಂದು ಮನವಿಯಲ್ಲಿ ಆರೋಪ ಮಾಡಲಾಗಿದೆ.

ರಾಜ್ಯಪಾಲರು ಕೋಮು ಭಾವನೆ ಪ್ರಚೋದನೆಗೆ ಆಸ್ಪದ ಕೊಡುವಂಥ ಅಂಶಗಳನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ, ಅವರಿಂದ ಶಾಂತಿಗೆ ಧಕ್ಕೆ ಉಂಟಾಗುತ್ತಿದೆ. ಅವರು ಸಂವಿಧಾನದತ್ತವಾಗಿರುವ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಡಿಎಂಕೆ, ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಸಹಿ ಹಾಕಿರುವ ಮನವಿಯಲ್ಲಿ ಟೀಕಿಸಲಾಗಿದೆ. ಅವರು ಮಾಡಿರುವ ಕೆಲವೊಂದು ಭಾಷಣಗಳಲ್ಲಿ ತಮಿಳುನಾಡಿನ ದ್ರಾವಿಡ ಸಂಸ್ಕೃತಿಯ ವರ್ಚಸ್ಸು ಕುಗ್ಗಿಸಿ ಮಾತನಾಡಿದ್ದಾರೆ. ಹೀಗಾಗಿ, ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಆರಿಫ್ ವಿರುದ್ಧ ಸುಗ್ರೀವಾಜ್ಞೆ
ಕೇರಳದಲ್ಲಿ ವಿವಿಗಳ ನೇಮಕ ವಿಚಾರದಲ್ಲಿ ಎಲ್‌ಡಿಎಫ್ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ನಡುವಿನ ಭಿನ್ನಾಭಿಪ್ರಾಯ ಮತ್ತೂಂದು ಮಜಲು ಪ್ರವೇಶಿಸಿದೆ. ರಾಜ್ಯಗಳ ವಿವಿಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಮುಕ್ತಿಗೊಳಿಸುವ ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಕುತೂಹಲಕಾರಿ ಅಂಶವೆಂದರೆ ಸುಗ್ರೀವಾಜ್ಞೆಗೆ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರೇ ಸಹಿ ಹಾಕಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಪಿ.ರಾಜೀವ್‌ “ರಾಜ್ಯಪಾಲರ ಅಧಿಕಾರಕ್ಕೆ ಅಡ್ಡಿ ಬರುತ್ತಿಲ್ಲ. ನಮಗೆ ಆ ಅಧಿಕಾರವೇ ಇಲ್ಲವೆಂದಿದ್ದಾರೆ. ವಿವಿಗಳಿಗೆ ಕುಲಪತಿಗಳಿಗೆ ನೇಮಕ ಮಾಡುವ ಅಧಿಕಾರವನ್ನು ಸರ್ಕಾರದಲ್ಲಿ ಇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ’ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಕೂಡ ಟಿಎಂಸಿ ಸರ್ಕಾರ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳುವ ತೀರ್ಮಾನ ಕೈಗೊಂಡಿತ್ತು. ಅದಕ್ಕೆ ಸಂಬಂಧಿಸಿದ ವಿಧೇಯಕವೂ ಅಂಗೀಕಾರವಾಗಿದೆ.

ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದೆ: ತಮಿಳ್‌ಸೈ
ತೆಲಂಗಾಣದ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಸರ್ಕಾರ ಕೂಡ ರಾಜ್ಯಪಾಲೆ ತಮಿಳ್‌ಸೈ ಸುಂದರರಾಜನ್‌ ಹಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದೆ. ಅದಕ್ಕೆ ಪುಷ್ಟಿ ಎಂಬಂತೆ ಬುಧವಾರ ಮಾತನಾಡಿದ ರಾಜ್ಯಪಾಲೆ “ನನ್ನ ಫೋನ್‌ ಅನ್ನು ಕದ್ದಾಲಿಸಲಾಗುತ್ತಿರುವ ಬಗ್ಗೆ ಸಂಶಯಗಳು ಉಂಟಾಗಿವೆ’ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಲ್ಲದ ವ್ಯವಸ್ಥೆ ಇದೆ. ವಿಶೇಷವಾಗಿ ರಾಜ್ಯಪಾಲರಿಗೆ ನೀಡಬೇಕಾಗಿರುವ ಮಾನ್ಯತೆ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ. ಇತ್ತೀಚೆಗೆ ಸುದ್ದಿಯಾದ್ದ ಟಿಆರ್‌ಎಸ್‌ ಶಾಸಕರಿಗೆ ಆಮಿಷ ವಿಚಾರದಲ್ಲಿ ಕೆಲವೊಂದು ಜಾಲತಾಣಗಳಲ್ಲಿ ರಾಜಭವನವನ್ನು ಟ್ಯಾಗ್‌ ಮಾಡಿ, ಅಪ್‌ಲೋಡ್‌ ಮಾಡಲಾಗಿರುವ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಲು ತಮಿಳ್‌ಸೈ ಸುಂದರರಾಜನ್‌ ನಿರಾಕರಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next