Advertisement

Manipur ದಲ್ಲಿ ನಿಲ್ಲದ ಹಿಂಸಾಚಾರ: ತಾಯಿ, ಮಗು ಸೇರಿ ಮೂವರ ಸಜೀವ ದಹನ

08:41 PM Jun 07, 2023 | Team Udayavani |

ಇಂಫಾಲ/ನವದೆಹಲಿ: ಮಣಿಪುರದಲ್ಲಿ ಎದ್ದಿರುವ ಜನಾಂಗೀಯ ಹಿಂಸಾಚಾರದ ಬೆಂಕಿ ಇನ್ನೂ ಆರಿಲ್ಲ. ಬುಧವಾರ ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ವೊಂದರ ಮೇಲೆ ಗುಂಪೊಂದು ದಾಳಿ ನಡೆಸಿ, ಬೆಂಕಿ ಹಚ್ಚಿದ್ದು, ಒಳಗಿದ್ದ 8 ವರ್ಷದ ಮಗು, ತಾಯಿ ಹಾಗೂ ಮತ್ತೂಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

Advertisement

ಮೃತರನ್ನು 45 ವರ್ಷದ ಮೀನಾ ಹಂಗ್‌ಸಿಂಗ್‌, 8 ವರ್ಷ ಟೋನ್ಸಿಂಗ್‌ ಹಂಗ್‌ಸಿಂಗ್‌ ಮತ್ತು ಸಂಬಂಧಿ ಲಿಡಿಯಾ ಲೂರೆಂಬಮ್‌(37) ಎಂದು ಗುರುತಿಸಲಾಗಿದೆ. ಮೀನಾ ಅವರು ಮೈತೇಯಿ ಸಮುದಾಯಕ್ಕೆ ಸೇರಿದ್ದು, ಅವರು ಬುಡಕಟ್ಟು ಸಮುದಾಯದ(ಕುಕಿ) ವ್ಯಕ್ತಿಯನ್ನು ವಿವಾಹವಾಗಿದ್ದರು. ಇವರ ಏಕೈಕ ಪುತ್ರನೇ ಟೋನ್ಸಿಂಗ್‌. ಗಲಭೆ ತೀವ್ರಗೊಂಡ ಸಮಯದಲ್ಲಿ ಈ ಕುಟುಂಬವು ಅಸ್ಸಾಂ ರೈಫ‌ಲ್ಸ್‌ನ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿತ್ತು. ಜೂ.4ರ ರಾತ್ರಿ ಈ ಪ್ರದೇಶದಲ್ಲಿ ಏಕಾಏಕಿ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಒಂದು ಗುಂಡು ಮಗುವಿನ ದೇಹವನ್ನು ಹೊಕ್ಕಿತ್ತು. ಕೂಡಲೇ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ, ತಾಯಿ -ಮಗು ಮತ್ತು ಸಂಬಂಧಿಯೊಬ್ಬರನ್ನು ಸಮೀಪದ ಆಸ್ಪತ್ರೆಗೆ ಕಳುಹಿಸಲಾಯಿತು.

ಆ್ಯಂಬುಲೆನ್ಸ್‌ ಇಸೋಯೆಂಬಾ ಪ್ರದೇಶಕ್ಕೆ ತಲುಪುತ್ತಿದ್ದಂತೆ, ಪ್ರತಿಭಟನಾಕಾರರ ಗುಂಪೊಂದು ಅದನ್ನು ತಡೆದು ಬೆಂಕಿ ಹಚ್ಚಿತು. ಒಳಗಿದ್ದ ಮೂವರೂ ಸಜೀವ ದಹನಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವ ಅಮಿತ್‌ ಶಾ ನಿವಾಸದ ಹೊರಗೆ ಪ್ರತಿಭಟನೆ

ಮಣಿಪುರದ ಕುಕಿ ಸಮುದಾಯದ ಜನರು ಬುಧವಾರ ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. “ಕುಕಿ ಜೀವಗಳನ್ನು ರಕ್ಷಿಸಿ’ ಎಂದು ಬರೆದಿರುವ ಫ‌ಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದ್ದಾರೆ. ಕೊನೆಗೆ ಪ್ರತಿಭಟನಾಕಾರರ ಪೈಕಿ ನಾಲ್ವರನ್ನು ಗೃಹ ಸಚಿವರ ನಿವಾಸದೊಳಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಲಾಯಿತು. ಉಳಿದ ಪ್ರತಿಭಟನಾಕಾರರನ್ನು ಜಂತರ್‌ ಮಂತರ್‌ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next