ಬೆಂಗಳೂರು: ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್ “ಝಡ್’ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ಅನುಮತಿ ಪಡೆಯದೇ ಅನಧಿಕೃತವಾಗಿ ಕಟ್ಟಲಾಗಿದ್ದ ಕಾಂಪೌಂಡ್ ಅನ್ನು ಗುರುವಾರ ತೆರವುಗೊಳಿಸಲಾಗಿದೆ. ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್‌ಗ ಮತ್ತೂಮ್ಮೆ ನೋಟಿಸ್ ನೀಡಿ, ನಂತರ ಕಟ್ಟಡ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್‌ಗ ಗುತ್ತಿಗೆ ನೀಡುವ ಸಂದರ್ಭದಲ್ಲಿ 10 ಎಕರೆ ಭೂಮಿಯನ್ನು ಎಕ್ಸ್, ವೈ, ಝಡ್ ಎಂಬ ಮೂರು ವಿಭಾಗವಾಗಿ ವರ್ಗೀಕರಿಸ ಲಾಗಿತ್ತು. ಎಕ್ಸ್ ಎಂದು ಗುರುತಿಸಲಾಗಿರುವ ಪ್ರದೇಶವು ಉದ್ಯಾನವಾಗಿದ್ದು, ಪಾಲಿಕೆ ವತಿಯಿಂದ ನಿರ್ವಹಣೆ ಮಾಡಲಾಗುತ್ತದೆ. ವೈ ಎಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಬ್ಯಾಡ್‌ಮಿಂಟನ್ ಹಾಲ್, ಕಾಟೇಜ್‌ಗಳು, ವಸತಿಗೃಹಗಳು ಹಾಗೂ ಕಾರು ನಿಲುಗಡೆಗೆ ಅವಕಾಶ ನೀಡಲಾಗುತ್ತದೆ. ಝಡ್ ವಲಯದಲ್ಲಿ ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್‌ನ ಮುಖ್ಯ ಕಟ್ಟಡ ಎಂದು ಗುರುತಿಸಲಾಗಿತ್ತು. ಆದರೆ, ಪಾಲಿಕೆ ಅನುಮತಿ ಪಡೆಯದೇ ಝಡ್ ವಲಯದಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ. ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಂಡಿಲ್ಲ. ಆದ್ದರಿಂದ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದರು.
ಏನಿದು ಪ್ರಕರಣ?: ಶಾಂತಿನಗರ ಉಪವಿಭಾಗದ ವ್ಯಾಪ್ತಿಯ ಸೇಂಟ್‌ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್‌ಗ 99 ವರ್ಷದ ವರೆಗೆ 10 ಎಕರೆ ಜಮೀನನ್ನು 1956ರಲ್ಲಿ ಬೆಂಗಳೂರು ಸಿಟಿ ಕಾರ್ಪೊ ರೇಷನ್ ಗುತ್ತಿಗೆ ನೀಡಿತ್ತು. ಯಾರಿಗೂ ಉಪ ಗುತ್ತಿಗೆ ಯಾಗಲಿ, ಮಾರಾಟ ಮಾಡುವುದಾಗಲಿ ಮಾಡಿದರೆ ಗುತ್ತಿಗೆಯನ್ನು ರದ್ದುಗೊಳಿಸುವುದಾಗಿ ಷರತ್ತು ವಿಧಿಸಲಾಗಿತ್ತು. ಆದರೆ, ಬೌರಿಂಗ್ ಇನ್ಸ್‌ಟಿಟ್ಯೂಟ್ ಕ್ಲಬ್ ಪೆಟ್ರೋಲ್ ಬಂಕ್ ನಡೆಸಲು 15 ಸಾವಿರ ಚ. ಅಡಿ ಜಾಗವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ 20 ವರ್ಷದವರೆಗೆ ಕಾನೂನು ಬಾಹಿರವಾಗಿ ಉಪಗುತ್ತಿಗೆ ನೀಡಿದೆ.
ನಂತರ 1989 ಮತ್ತು 2009ರಲ್ಲಿ ಇದೇ ಕಂಪನಿಗೆ ಉಪ ಗುತ್ತಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಸರ್ಕಾರದ ಅನುಮೋದನೆ ಪಡೆಯದೇ ಗುತ್ತಿಗೆ ನೀಡಲಾಗಿತ್ತು ಹಾಗೂ ಅದರಿಂದ ಬಂದ ಬಾಡಿಗೆ ಹಣವನ್ನೂ ಸರ್ಕಾರಕ್ಕೆ ಕಟ್ಟಿಲ್ಲ. ಮೂಲ ಒಪ್ಪಂದದ ಪ್ರಕಾರ “ವೈ’ ಪ್ರದೇಶದಲ್ಲಿ ಮಾತ್ರ ಕಟ್ಟಡಗಳನ್ನು ಕಟ್ಟಬೇಕು. ಆದರೆ “ಝಡ್’ ಪ್ರದೇಶದಲ್ಲಿ ಕಟ್ಟಡಗಳನ್ನು ಕಟ್ಟಿದ್ದು, ಭೂ ಮಂಜೂರಾತಿ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಪೆಟ್ರೋಲ್ ಬಂಕ್ ಮಾತ್ರವಲ್ಲದೇ ಹಾಪ್‌ಕಾಮ್ಸ್, ಕೇಕ್‌ಶಾಪ್, ಚಾಟ್ ಕೌಂಟರ್, ಕ್ಯಾಶ್ ಕೌಂಟರ್, ಕ್ಯಾಂಟೀನ್ ಸೇರಿದಂತೆ ಮಳಿಗೆ ನಿರ್ಮಾಣಕ್ಕೆ ಉಪಗುತ್ತಿಗೆ ನೀಡಲಾಗಿದ್ದು, ಇದರಿಂದಲೂ ಸರ್ಕಾರಕ್ಕೆ ಆದಾಯ ಬಂದಿಲ್ಲ. ಕ್ಲಬ್ 10 ಎಕರೆಗೆ ವಾರ್ಷಿಕ ಬಾಡಿಗೆಯಾಗಿ 30 ರೂ. ಪಾವತಿಸುತ್ತಿದ್ದು, ಪೆಟ್ರೋಲ್ ಬಂಕ್‌ನಿಂದ ಪ್ರತಿ ತಿಂಗಳು 2.75 ಲಕ್ಷ ರೂ. ಪಡೆಯುತ್ತಿರುವುದಾಗಿ ಆರೋಪಗಳು ಕೇಳಿ ಬರುತ್ತಿದ್ದವು.