ಹುಬ್ಬಳ್ಳಿ: ಉಣಕಲ್ಲ ಕೆರೆಯಲ್ಲಿನ ಜಲಕಳೆ ಅಂತರಗಂಗೆ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕೆರೆಯಲ್ಲಿ 3 ಅಡಿ ನೀರನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಂತರ ನೀರು ಸ್ವತ್ಛಗೊಳಿಸುವ ಜಲಚರಗಳನ್ನು ತಂದು ಕೆರೆಯಲ್ಲಿ ಬಿಡುವ ಚಿಂತನೆ ನಡೆದಿದೆ.
ಪೈಪ್‌ಗಳ ಮೂಲಕ ನೀರನ್ನು ತೆರವು ಮಾಡಲಾಗುತ್ತಿದೆ. ಕೆರೆಯ ದಡದಲ್ಲಿ ಸಂಗ್ರಹಗೊಂಡ ಕಸವನ್ನು ತೆಗೆದರೆ ಅಲ್ಲಿ ಅಂತರಗಂಗೆ ಬೆಳೆಯುವುದನ್ನು ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ ನಂತರ ಕೆರೆಯ ಮೂರು ಅಡಿ ನೀರನ್ನು ತೆರವು ಮಾಡುವ ಕಾರ್ಯ ಸಾಗಿದೆ. ಈಗಾಗಲೇ 1 ಅಡಿ ನೀರನ್ನು ತೆರವು ಮಾಡಲಾಗಿದೆ. ಇನ್ನೂ 15-20 ದಿನಗಳಲ್ಲಿ ನೀರನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಶುರು ಮಾಡುವ ಸಾಧ್ಯತೆಯಿದೆ.
ಹೂಳು ತೆಗೆಯಲು ದೇಶಪಾಂಡೆ ಫೌಂಡೇಶನ್ ಹಿತಾಚಿ ಯಂತ್ರವನ್ನು ನೀಡಿದ್ದು, ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಕೆರೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಲಾಗುತ್ತಿದೆ. 4 ಇಂಚು ಅಗಲದ ಸುಮಾರು 47 ಪೈಪ್ ಗಳನ್ನು ಬಳಕೆ ಮಾಡಿಕೊಂಡು ಕೆರೆಯಲ್ಲಿನ ನೀರನ್ನು ನಾಲಾಕ್ಕೆ ಬಿಡಲಾಗುತ್ತಿದೆ. ಕಳೆದ 12 ದಿನಗಳಿಂದ ಪೈಪ್ ಗಳ ಮೂಲಕ ತೆರವು ಮಾಡಿದರೂ ಕೆರೆಯಲ್ಲಿನ 1 ಅಡಿ ನೀರು ಮಾತ್ರ ಕಡಿಮೆಯಾಗಿದೆ. ಆದರೆ ಹಿತಾಚಿ ಕೆರೆಯ ದಡಕ್ಕಿಳಿಯಲು ಅನುಕೂಲವಾಗುವ ಮಟ್ಟಿಗೆ ನೀರನ್ನು ಹೊರಗೆ ಬಿಡಲಾಗುವುದು.ಒಂದೆಡೆ ಕೆರೆಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದರೆ ಇನ್ನೊಂದೆಡೆ ಬೈರಿದೇವರಕೊಪ್ಪ, ನವನಗರ ಭಾಗದಿಂದ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ. ಇದನ್ನು ತಡೆಯುವುದು ಅವಶ್ಯಕವಾಗಿದೆ.
ಮಹಾನಗರ ಪಾಲಿಕೆ, ದೇಶಪಾಂಡೆ ಪ್ರತಿಷ್ಠಾನದೊಂದಿಗೆ ಹಲವಾರು ಸಂಘ-ಸಂಸ್ಥೆಗಳು ಕೆರೆ ಅಭಿವೃದ್ಧಿಗೆ ಕೈಜೋಡಿಸಿವೆ. ಅದರಲ್ಲಿ ಮುಖ್ಯವಾಗಿರುವುದು ಉಣಕಲ್ಲ ಕೆರೆ ಅಭಿವೃದ್ಧಿ ಸಂಘ. ಅಂತರಗಂಗೆ ತೆರವು ಕಾರ್ಯಾಚರಣೆ ಅಭಿಯಾನ ಕೈಗೊಂಡಿದ್ದ ಸಂಘದ ಕಾರ್ಯಕ್ಕೆ ಹಲವು ಸಂಸ್ಥೆಗಳು ಸಹಕರಿಸುತ್ತಿವೆ. ಯುವಾ ಬ್ರಿಗೇಡ್, 99 ಬೈಕ್ ರೇಸರ್ಸಂ ಘ, ಶಾಂತೇಶ್ವರ ಗೆಳೆಯರ ಬಳಗ, ಭಗತ್‌ಸಿಂಗ್ ಸೇವಾ ಸಂಸ್ಥೆ ಕೆರೆ ಅಭಿವೃದ್ಧಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿವೆ.
ಕೆರೆ ಜಲಕಳೆಯಿಂದ ಮುಕ್ತಗೊಂಡು, ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲು ಕ್ರಮ ಕೈಗೊಂಡ ನಂತರ, ಮೀನು ಹಿಡಿಯುವುದನ್ನು ನಿಷೇಧಿಸಿದ ನಂತರ ಉಣಕಲ್ಲ ಕೆರೆ ಅಭಿವೃದ್ಧಿ ಸಂಘದ ವತಿಯಿಂದ ನೀರನ್ನು ಸ್ವತ್ಛವಾಗಿಡಲು ಸಹಕರಿಸುವ ಸಕ್ಕರ್‌ಮೌತ್ ಕ್ಯಾಟ್ ಫಿಶ್, ಮಾಸ್ಕಿಟೊ ಫಿಶ್, ಸಿಯಾಮೆಸ್ ಅಲ್ಗೆ ಈಟರ್, ಗ್ರಾಸ್ ಕಾರ್ಪ್ ಮೊದಲಾದ ಜಲಚರಗಳನ್ನು ಕೆರೆಗೆ ಬಿಡಲು ಚಿಂತನೆ ನಡೆದಿದೆ. ಅವುಗಳನ್ನು ಮಂಡ್ಯ ಹಾಗೂ ಮೈಸೂರಿನಿಂದ ತರಲು ನಿರ್ಧರಿಸಿದ್ದು, ಸಾರಿಗೆ ಸಂಸ್ಥೆಯವರೊಬ್ಬರು ಉಚಿತವಾಗಿ ಜಲಚರಗಳನ್ನು ಸಾಗಣೆ ಮಾಡಲು ಒಪ್ಪಿಕೊಂಡಿದ್ದಾರೆ.
ಉಣಕಲ್ಲ ಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಉದ್ಯಾನವನ್ನು ಅಭಿವೃದ್ಧಿಪಡಿಸಲು, ಕೆರೆಯಲ್ಲಿ ಜಲಕ್ರೀಡೆಗಳ ಸೌಲಭ್ಯ ಕಲ್ಪಿಸುವ ವಿನ್ಯಾಸ ಮಾಡಲಾಗುತ್ತಿದೆ. ಜಲಶುದ್ಧೀಕರಿಸುವ ಘಟಕ ಶೀಘ್ರದಲ್ಲಿ ಆರಂಭಿಸುವುದು ಅಗತ್ಯ. ಒಟ್ಟಿನಲ್ಲಿ ಉಣಕಲ್ಲ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸುವುದು ಅವಶ್ಯಕವಾಗಿದೆ.
ಮಹಾನಗರ ಪಾಲಿಕೆ ವತಿಯಂದ ಉಣಕಲ್ಲ ಕೆರೆಯ ನೀರನ್ನು ತೆರವುಗೊಳಿಸಲಾಗುತ್ತಿದೆ. ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಿವೆ. ಕೊಳಚೆ ನೀರು ಕೆರೆಯನ್ನು ಸೇರದಂತೆ ತಡೆಯುವುದು ಅವಶ್ಯಕವಾಗಿದೆ. ದಡದಲ್ಲಿರುವ ಕಸವನ್ನು ತೆರವು ಮಾಡಿದರೆ ಅಂತರಗಂಗೆ ಬೆಳೆಯದಂತೆ ತಡೆಯಬಹುದಾಗಿದೆ. ಉಣಕಲ್ಲ ಕೆರೆ ಸ್ಮಾರ್ಟ್‌ಸಿಟಿ ಯೋಜನೆ ವ್ಯಾಪ್ತಿಗೆ ಸೇರಿರುವುದು ಖುಷಿಯ ಸಂಗತಿ. ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ ಕೆರೆಯನ್ನು ಪ್ರವಾಸಿ ತಾಣವಾಗಿಸಬೇಕಿದೆ.
–ರಾಜಣ್ಣ ಕೊರವಿ, ಪಾಲಿಕೆ ಮಾಜಿ ಸದಸ್ಯ
-ವಿಶ್ವನಾಥ ಕೋಟಿ