ತುಮಕೂರು: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ. 2ರ ಸೋಮವಾರ ಬೆಳಿಗ್ಗೆ ನಗರ ಸಮೀಪದ ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ.
ರೈಲಿಗೆ ಸಿಲುಕಿ ಸಿದ್ದಗಂಗಯ್ಯ (62), ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಮೃತರು ತುಮಕೂರಿನ ಮರಳೂರು ನಿವಾಸಿಯಾಗಿದ್ದು, ಸಿದ್ದಗಂಗಯ್ಯ ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಸಾಕಷ್ಟು ಸಾಲ ಮಾಡಿಕೊಂಡಿದ್ದ ಇವರು ಬೆಂಗಳೂರಿನ ಮಲ್ಲೇಶ್ವರಂ ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡಿದ್ದರು.
ಸೋಮವಾರ ಮುಂಜಾನೆ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲು ಸಿಕ್ಕಿದ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲೆಯಾಗಿ ಬಿದ್ದಿದ್ದವು.
ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.