ವಾಷಿಂಗ್ಟನ್: ಪಾಕ್ ಮೂಲದ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಅಬ್ದುಲ್ ರೆಹಮಾನ್ ಮಕ್ಕಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ( ಜ.16 ರಂದು) ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ಸೇರಿಸಿದೆ.
2020 ರಲ್ಲಿ ಭಾರತ ಅಬ್ದುಲ್ ರೆಹಮಾನ್ ಮಕ್ಕಿಯನ್ನು ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂದು ಪ್ರಸ್ತಾಪ ಮಾಡಿತ್ತು. ಆ ವೇಳೆ ಚೀನಾ ಇದಕ್ಕೆ ಅಡ್ಡಗಾಲು ಹಾಕಿತ್ತು. 2022 ರ ಜೂನ್ ನಲ್ಲಿ ಈ ಸಂಬಂಧ ಚೀನಾವನ್ನು ಭಾರತ ತರಾಟೆಗೆ ತೆಗೆದುಕೊಂಡಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ಸೇರಿಸಿದೆ.
“16 ಜನವರಿ 2023 ರಂದು, ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ISIL (ದಯೆಶ್), ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಅನುಮೋದಿಸಿತು. ಈ ನಿರ್ಣಯದಲ್ಲಿ ವ್ಯಕ್ತಿಯ ಸ್ವತ್ತುಗಳ ಮುಟ್ಟಗೋಲು ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಸೂಚಿಸಲಾಗಿದೆ ಎಂದು ಭದ್ರತಾ ಮಂಡಳಿ ಹೇಳಿದೆ.
ಭಾರತಕ್ಕೆ ಮೋಸ್ಟ್ ವಾಂಟೆಡ್ ಈ ಮಕ್ಕಿ:
Related Articles
ಎಲ್‌ಇಟಿ/ಜೆಯುಡಿ ಕಾರ್ಯಕರ್ತರೊಂದಿಗೆ ಸೇರಿಕೊಂಡು ಹಣ ಸಂಗ್ರಹ ಮಾಡುವುದರಲ್ಲಿ, ಯುವಕರನ್ನು ಹಿಂಸಾಚಾರಕ್ಕೆ ನೇಮಿಸಿಕೊಳ್ಳುವುದು ಮತ್ತು ಅವರನ್ನು ಉಗ್ರ ಚಟುವಟಿಕೆಗೆ ಪ್ರೇರೆಪಿಸಿ,ಜಮ್ಮು ಕಾಶ್ಮೀರದಲ್ಲಿ ದಾಳಿಗೆ ಯೋಜನೆ ಹಾಕುವುದರಲ್ಲಿ ಅಬ್ದುಲ್ ರೆಹಮಾನ್ ಮಕ್ಕಿ ಹೆಸರು ಕೇಳಿ ಬಂದಿತ್ತು.
ಭಾರತ ಮತ್ತು ಅಮೆರಿಕಾ ಈಗಾಗಲೇ ಮಕ್ಕಿಯನ್ನು ತಮ್ಮ ದೇಶೀಯ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ. 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಭಾವ ಈ ಮಕ್ಕಿ.
ಎಲ್‌ಇಟಿ ಮತ್ತು ಜೆಯುಡಿಯಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದ್ದ ಮಕ್ಕಿ ಈ ಕೆಳಕಂಡ ದಾಳಿಗಳ ಹಿಂದಿನ ರೂವಾರಿಯಾಗಿದ್ದನು ಎಂದು ವಿಶ್ವ ಸಂಸ್ಥೆ ಹೇಳಿದೆ.
ಕೆಂಪು ಕೋಟೆ ದಾಳಿ: ಡಿಸೆಂಬರ್ 22, 2000 ರಂದು ಆರು ಎಲ್‌ಇಟಿ ಭಯೋತ್ಪಾದಕರು ಕೆಂಪು ಕೋಟೆಗೆ ನುಗ್ಗಿ ಮತ್ತು ಕೋಟೆಯನ್ನು ಕಾವಲು ಕಾಯುತ್ತಿದ್ದ ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯ ಹಿಂದೆ ಮಕ್ಕಿ ಇದ್ದ.
ರಾಂಪುರ ದಾಳಿ: ಐವರು ಎಲ್‌ಇಟಿ ಭಯೋತ್ಪಾದಕರು ಜನವರಿ 1, 2008 ರಂದು ರಾಂಪುರದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ ಮೇಲೆ ದಾಳಿ ಮಾಡಿದರು, ಇದರಲ್ಲಿ ಏಳು ಸಿಬ್ಬಂದಿ ಮತ್ತು ರಿಕ್ಷಾ ಚಾಲಕರು ಕೊಲ್ಲಲ್ಪಟ್ಟಿದ್ದರು.
26/11 ಮುಂಬೈ ದಾಳಿ: ಭಾರತದಲ್ಲಿ ಎಲ್‌ಇಟಿ ನಡೆಸಿದ ಭೀಕರ ದಾಳಿಯಲ್ಲಿ ಮುಂಬೈ ದಾಳಿ ಒಂದು. ಪಾಕಿಸ್ತಾನದಿಂದ 10 ಭಯೋತ್ಪಾದಕರು ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಮೀರ್ ಅಜ್ಮಲ್ ಕಸಬ್ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಉಳಿದವರು ಕೊಲ್ಲಲ್ಪಟ್ಟಿದ್ದರು.
ಇದಲ್ಲದೇ 2018 ರ 12-13 ಫೆಬ್ರವರಿಯಲ್ಲಿ ನಡೆದ ಕರಣ್ ನಗರ, ಶ್ರೀನಗರ ದಾಳಿ, 30 ಮೇ 2018 ರಲ್ಲಿ ನಡೆದ ಖಾನ್ಪೋರಾ, ಬಾರಾಮುಲ್ಲಾ ದಾಳಿ, 14 ಜೂನ್ 2018 ರಲ್ಲಿ ನಡೆದ ಶ್ರೀನಗರ ದಾಳಿ ಹೀಗೆ ಹತ್ತಾರು ಎಲ್ ಇಟಿ ಹೊಣೆಯ ಕೃತ್ಯದ ಹಿಂದೆ ಮಾಸ್ಟರ್ ಮೈಂಡ್ ಆಗಿದ್ದ ಈ ಮಕ್ಕಿ.