ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನಾವಶ್ಯಕವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾವಿಸಿದ ಪಾಕಿಸ್ಥಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿತು.
ಗುರುವಾರ ನಡೆದ ವಿಶ್ವಸಂಸ್ಥೆಯ ಸಮಗ್ರ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪ್ರತೀಕ್ ಮಥುರ್, “ಪಾಕಿಸ್ಥಾನವು ಪದೇ ಪದೆ ಸುಳ್ಳುಗಳನ್ನು ಹಬ್ಬಿಸುವ ಹತಾಶ ಪ್ರಯತ್ನಕ್ಕೆ ಇಳಿಯುತ್ತಿದೆ. ಬಹುಪಕ್ಷೀಯ ವೇದಿಕೆಯ ಪಾವಿತ್ರ್ಯವನ್ನು ಹಾಳು ಮಾಡುವ ಅದರ ಕೆಟ್ಟ ಅಭ್ಯಾಸವು ಅಂತಾರಾಷ್ಟ್ರೀಯ ಸಮುದಾಯದ ಸಾಮೂಹಿಕ ತಿರಸ್ಕಾರಕ್ಕೆ ಅರ್ಹವಾಗಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗಳ ಕುರಿತ ಅತೀ ಮುಖ್ಯ ವಿಷಯದ ಬಗ್ಗೆ ಚರ್ಚಿಸಲು ಪ್ರಸ್ತುತ ಸಭೆ ನಡೆಯುತ್ತಿದೆ. ಆದರೆ ಇದರ ಮಹತ್ವವನ್ನು ಅರಿಯದ ಪಾಕ್ ಪ್ರತಿನಿಧಿಗಳು ಅನಾವಶ್ಯಕವಾಗಿ ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾವಿಸುತ್ತಿದ್ದಾರೆ,’ ಎಂದು ಬೇಸರ ವ್ಯಕ್ತಪಡಿಸಿದರು.
“ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಸುಳ್ಳುಗಳನ್ನು ಹರಡುವ ಪಾಕ್ ಚಟವು ತಿರಸ್ಕಾರಕ್ಕೆ ಯೋಗವಾದದ್ದು, ಮತ್ತು ಅದು ಸ್ವಲ್ಪ ಸಹಾನುಭೂತಿಯನ್ನು ಕೂಡ ಬಯಸುತ್ತದೆ,’ ಎಂದು ಹೇಳಿದರು.