Advertisement

ಶೇ. 24 ಅರಣ್ಯ ವನ್ಯಜೀವಿಗಳಿಗೆ ಮೀಸಲು : ಸಚಿವ ಉಮೇಶ್‌ ಕತ್ತಿ

12:20 AM Jun 24, 2022 | Team Udayavani |

ವೇಣೂರು : ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅರಣ್ಯ ಭೂಮಿಯ ಸರ್ವೇ ನಡೆಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 45 ಲಕ್ಷ ಹೆಕ್ಟೇರ್‌ ಅರಣ್ಯ ಭೂಮಿ ಇದ್ದು, ಇದರಲ್ಲಿ ಶೇ. 24ರಷ್ಟು ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ ಎಂದು ಅರಣ್ಯ ಸಚಿವ ಉಮೇಶ್‌ ವಿ. ಕತ್ತಿ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಅರಣ್ಯೀಕರಣ ಯೋಜನೆಯ ಅಂಗವಾಗಿ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಗುರುವಾರ ಜರಗಿದ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

20 ಕೋಟಿ ರೂ. ಪರಿಹಾರ
ಕಳೆದ ಮಾನವ ಮತ್ತು ಪ್ರಾಣಿಗಳ ಸಂಘರ್ಷದಿಂದಾದ ಹಾನಿಗೆ ಬಾರಿ 20 ಕೋಟಿ ರೂ. ಪರಿಹಾರ ನೀಡಿದ್ದೇವೆ. ಈ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರು ಕಾಡುಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಪ್ರೇರೇಪಿಸುವ ಮೂಲಕ ರೈತರ ಕೃಷಿ ಬೆಳೆಗಳನ್ನು ರಕ್ಷಿಸಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾ ಸಿದರು.

57 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿದಿರು
ರಾಜ್ಯದಲ್ಲಿ ಇಂದು ಬಿದಿರಿಗೆ ಹೆಚ್ಚಿನ ಪ್ರಾಮುಖ್ಯ ಬಂದಿದ್ದು, ಕೇರಳದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆಯ 57 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿದಿರು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸಕ ಹರೀಶ್‌ ಪೂಂಜ ಅವರು ದೇವರಕಾಡು ಸಸಿ ವಿತರಿಸಿದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಅವರು ಕೆರೆಯಂಗಳ ಸಸಿ ವಿತರಣೆ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ ಹಣ್ಣಿನ ಸಸಿ ವಿತರಿಸಿದರು. ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌ ಶಾಲಾವನ ಸಸಿವಿತರಣೆ ನೆರವೇರಿಸಿದರು. ಶ್ರೀ ಕ್ಷೇತ್ರ ಪಡ್ಡಾéರಬೆಟ್ಟದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್‌, ಶೀಲಾ ಉಮೇಶ್‌ ಕತ್ತಿ, ಯೋಜನೆಯ ಟ್ರಸ್ಟಿ ಡಾ| ಸಂಪತ್‌ ಸಾಮ್ರಾಜ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ಡಾ| ದಿನೇಶ್‌ ಕುಮಾರ್‌ ವೈ.ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌, ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌, ವಲಯ ಅರಣ್ಯಾಧಿಕಾರಿ ಮಹೀಮ್‌ ಎಂ. ಜನ್ನು ಉಪಸ್ಥಿತರಿದ್ದರು.

Advertisement

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿ, ನಿರ್ದೇಶಕ ಸತೀಶ್‌ ಶೆಟ್ಟಿ ವಂದಿಸಿದರು. ಜನಜಾಗೃತಿ ವೇದಿಕೆಯ ವಿವೇಕ್‌ ವಿನ್ಸೆಂಟ್‌ ಪಾçಸ್‌ ಮತ್ತು ಯೋಜನಾಧಿಕಾರಿ ಯಶವಂತ ಎಸ್‌. ನಿರೂಪಿಸಿದರು.

ಸಮ್ಮಾನ
ಪರಿಸರ ಸ್ನೇಹಿ ಸಾಧಕರಾದ ಮಾಧವ ಉಳ್ಳಾಲ ಮತ್ತು ರಾಮಕೃಷ್ಣ ಭಟ್‌ ಪೆರಿಂಜೆ ಅವರಿಗೆ ಅರಣ್ಯಮಿತ್ರ ಪ್ರಶಸ್ತಿ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.

ಪ್ರಕೃತಿಗೆ ಕೃತಜ್ಞರಾಗಿರೋಣ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ನಾವು ಮನುಷ್ಯರನ್ನು ಪ್ರೀತಿಸುವಂತೆ ಪ್ರಕೃತಿಯನ್ನೂ ಪ್ರೀತಿಸಬೇಕು. ವನ್ಯಜೀವಿಗಳಿಗೆ ಆಹಾರದ ಕೊರತೆಯನ್ನು ನೀಗಿಸಿ ಅವುಗಳಿಗೆ ಬದುಕಲು ಅವಕಾಶ ನೀಡಿದಾಗ ನಮಗೆ ಅವುಗಳಿಂದ ರಕ್ಷಣೆ ಸಿಗುತ್ತದೆ. ಈ ನಿಟ್ಟಿನಲ್ಲಿ 4 ದಶಕಗಳಿಂದ ಸಾಮಾಜಿಕ ಅರಣ್ಯೀಕರಣಕ್ಕೆ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮ ನಡೆಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದೇವೆ. ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಅಪೇಕ್ಷಿಸಿದ್ದು, ಅದಕ್ಕೂ ಅರಣ್ಯ ಇಲಾಖೆ ಉತ್ತಮವಾಗಿ ಸ್ಪಂದಿಸಿದೆ. ನಾವೆಲ್ಲರೂ ಪ್ರಕೃತಿಗೆ ಕೃತಜ್ಞರಾಗಿರೋಣ ಎಂದು ತಿಳಿಸಿದರು.

“2024ರ ಚುನಾವಣೆ ಬಳಿಕ ರಾಜ್ಯಇಬ್ಭಾಗ’
ವೇಣೂರು: 2024ರ ಚುನಾವಣೆ ಬಳಿಕ ರಾಜ್ಯವನ್ನು ಇಬ್ಭಾಗ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ರಾಜ್ಯ ಅರಣ್ಯ ಸಚಿವ ಉಮೇಶ್‌ ಕತ್ತಿ ಸುಳಿವು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಗುರುವಾರ ಧರ್ಮಸ್ಥಳ ಗ್ರಾ.ಯೋ. ಸಹಯೋಗದಲ್ಲಿ ದಶಲಕ್ಷ ಹಣ್ಣಿನ ಗಿಡಿಗಳ ನಾಟಿ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಸಚಿವ ಕತ್ತಿ ಅವರು ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ರಾಜ್ಯದ ಜನಸಂಖ್ಯೆ ಇಂದು ಆರೂವರೆ ಕೋಟಿಗೆ ಬೆಳೆದು ನಿಂತಿದೆ. ಜನಸಂಖ್ಯೆ ಬೆಳೆದಂತೆ ರಾಜ್ಯಗಳ ವಿಭಜನೆ ಅನಿವಾರ್ಯವಾಗುತ್ತದೆ. ಕರ್ನಾಟಕದಲ್ಲಿ ಎರಡು ರಾಜ್ಯ, ಮಹಾರಾಷ್ಟ್ರದಲ್ಲಿ ಮೂರು ರಾಜ್ಯ, ಉತ್ತರಪ್ರದೇಶದಲ್ಲಿ ನಾಲ್ಕು ರಾಜ್ಯ ಈ ರೀತಿ ವಿಂಗಡಣೆ ಮಾಡುವ ಮೂಲಕ 50 ರಾಜ್ಯಗಳನ್ನು ದೇಶದಲ್ಲಿ ನಿರ್ಮಾಣ ಮಾಡಲು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next