Advertisement

ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ

11:36 PM Sep 07, 2022 | Team Udayavani |

ಬೆಲ್ಲದ ಬಾಗೇವಾಡಿ (ಬೆಳಗಾವಿ): ಆಹಾರ ಮತ್ತು ಅರಣ್ಯ ಸಚಿವ ಉಮೇಶ ವಿಶ್ವನಾಥ ಕತ್ತಿ (61) ಅವರ ಪಾರ್ಥಿವ ಶರೀರವನ್ನು ಬೆಳಗಾವಿಯಿಂದ ಹುಟ್ಟೂರು ಬೆಲ್ಲದ ಬಾಗೇವಾಡಿವರೆಗೆ ಅಂತಿಮ ಯಾತ್ರೆ ನಡೆಸಿ ವೀರಶೈವ ಲಿಂಗಾ ಯತ ಸಮುದಾಯದ ವಿಧಿ ವಿಧಾನದಂತೆ ಬುಧವಾರ ರಾತ್ರಿ ಅವರ ತೋಟದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

Advertisement

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತೋಟದಲ್ಲಿರುವ ತಂದೆ ವಿಶ್ವನಾಥ ಕತ್ತಿ ಅವರ ಸಮಾಧಿ  ಪಕ್ಕದಲ್ಲೇ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಠಾ ಧೀಶರು ಹಾಗೂ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಪುತ್ರ ನಿಖೀಲ್‌ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು.

ಅಂತ್ಯಕ್ರಿಯೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ,ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹಿತ ಪಕ್ಷದ ಹಾಗೂ ವಿಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ದರು.

ಪ್ರಧಾನಿ ಸಹಿತ ಗಣ್ಯರ ಸಂತಾಪ
ಉಮೇಶ್‌ ಕತ್ತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಪ್ರಹ್ಲಾದ್‌ ಜೋಷಿ, ನಿರ್ಮಲಾ , ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌, ರಾಜ್ಯಾಧ್ಯಕ್ಷ ನಳಿನ್‌ ಕುಮಾÃ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಮುನಿರತ್ನ, ವಿ.ಸೋಮಣ್ಣ, ಆರ್‌.ಅಶೋಕ್‌, ಸುನಿಲ್‌ ಕುಮಾರ್‌, ಸಿ.ಸಿ. ಪಾಟೀಲ್‌, ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಂದೂಡಿಕೆ
ಸೆ. 11ರಂದು ನಿಗದಿಯಾಗಿದ್ದ ರಾಜ್ಯ ಬಿಜೆಪಿ ಕಾರ್ಯ ಕಾರಿಣಿ ಸಭೆ ಮುಂದೂಡಿಕೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಂಡು ಮುಂಬರುವ ವಿಧಾನ ಸಭೆ ಚುನಾವಣೆ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಕಾರ್ಯ ಕಾರಿಣಿ ಸಭೆ ಕರೆಯಲಾಗಿತ್ತು. ಸಚಿವ ಉಮೇಶ್‌ ಕತ್ತಿ ಅಕಾಲಿಕ ನಿಧನದಿಂದ ಬಿಜೆಪಿಯ ಅಧಿಕೃತ ಕಾರ್ಯಕ್ರಮಗಳು ಬದಲಾಗಿದ್ದು, ಜೆ.ಪಿ. ನಡ್ಡಾ ಅವರ ಮುಂದಿನ ಸಮಯ ನೋಡಿಕೊಂಡು ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಉಸ್ತುವಾರಿ ಅರುಣ್‌ ಸಿಂಗ್‌ ರಾಜ್ಯಕ್ಕೆ ಆಗಮಿಸಿದ್ದು ಗುರುವಾರ ಬೆಳಗಾವಿಯಲ್ಲಿರುವ ಉಮೇಶ್‌ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

Advertisement

ಶನಿವಾರ ಜನಸ್ಪಂದನ
ಬೆಂಗಳೂರು: ಗುರುವಾರ ನಡೆಯಬೇಕಾಗಿದ್ದ ಸರಕಾರದ 3 ವರ್ಷಗಳ ಸಾಧನೆ ಹೇಳುವ ಜನೋ­ತ್ಸವ ಕಾರ್ಯಕ್ರಮವನ್ನು ಉಮೇಶ್‌ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಶನಿವಾರಕ್ಕೆ ಮುಂದೂಡ­ಲಾಗಿದೆ. ಕತ್ತಿ ಸಾವಿನಿಂದಾಗಿ 3 ದಿನ ಶೋಕಾಚರಣೆ ಘೋಷಿಸ­ಲಾಗಿದೆ.

ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಾಗಿದ್ದ ಕಾರ್ಯ­ಕ್ರಮವನ್ನು ಮುಂದೂಡಲಾಗಿದೆ. ಜನಸ್ಪಂದನ (ಜನೋತ್ಸವ) -ಸಾರ್ಥಕ ಸೇವೆ ಹಾಗೂ ಸಬಲೀಕರಣ ಕಾರ್ಯಕ್ರಮವನ್ನು ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆಸಲಾಗುತ್ತದೆ ಎಂದು ಸಚಿವ ಡಾ| ಸುಧಾಕರ್‌ ಹೇಳಿದ್ದಾರೆ.

ಕತ್ತಿ ಸಾವಿನ ಹೊರತಾಗಿಯೂ ಸರಕಾರ ಗುರುವಾರದ ಕಾರ್ಯಕ್ರಮವನ್ನು ನಿಗದಿಯಂತೆಯೇ ನಡೆ­ಸಲು ತೀರ್ಮಾನಿಸಿ, ಕೇವಲ ಒಂದು ದಿನ ಶೋಕಾಚರಣೆ ಘೋಷಿಸಿತ್ತು. ಅದಕ್ಕೆ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಬೇಕಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next