Advertisement

ಉಮೇಶ ಕತ್ತಿ ಕ್ರಿಯಾಶೀಲ, ನೇರ, ನಿಷ್ಠುರತೆಗೆ ಹೆಸರಾಗಿದ್ದರು : ಡಾ. ಮಹೇಶ್ ಜೋಶಿ

05:32 PM Sep 07, 2022 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯದ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕಂಬನಿ ಮಿಡಿದಿದ್ದಾರೆ.

Advertisement

ರಾಜಕೀಯ ಹಾಗೂ ಸಹಕಾರ ಕ್ಷೇತ್ರದ ಮೂಲಕ ಉಮೇಶ್ ಕತ್ತಿಯವರು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಒಂಬತ್ತು ಬಾರಿ ಚುನಾವಣೆ ಎದುರಿಸಿ, ಎಂಟು ಬಾರಿ ಗೆದ್ದು ಶಾಸಕರಾಗಿ, ನಾಲ್ಕು ಬಾರಿ ವಿವಿಧ ಖಾತೆಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ.ಅವರು ತಮ್ಮ ತಂದೆ ವಿಶ್ವನಾಥ್ ಕತ್ತಿ ನಿಧನದ ನಂತರ ರಾಜಕೀಯಕ್ಕೆ ಬಂದು 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾಗಿ ಕೆಲಸ ಮಾಡಿದ್ದರು. 2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು ಎಂದು ಹೇಳಿದ್ದಾರೆ.

ಉಮೇಶ ಕತ್ತಿ ಅವರು ರಾಜ್ಯದ ರಾಜಕಾರಣದಲ್ಲಿ ತಮ್ಮ ಕ್ರಿಯಾಶೀಲ, ನೇರ, ನಿಷ್ಠುರತೆಗೆ ಹೆಸರಾಗಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕು, ಇಲ್ಲದ ಪಕ್ಷದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು. ʻಕಲ್ಯಾಣ ಕರ್ನಾಟಕʼ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ, ತಾನು ಆ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ವೈಯಕ್ತಿಕವಾಗಿ ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಸಚಿವ ಉಮೇಶ್ ಕತ್ತಿ ಅವರು ಹಠಾತ್ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖ ಮತ್ತು ಆಘಾತವಾಗಿದೆ. ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ನಮ್ಮನ್ನಗಲಿರುವುದು ರಾಜ್ಯಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ದ ನಷ್ಟವಾಗಿದೆ. ದೇವರು ಅವರ ಪವಿತ್ರವಾದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next