ಬನಹಟ್ಟಿ : ಕಳೆದ ವರ್ಷ ಕೋವಿಡ್ ಹಿನ್ನಲೆಯಲ್ಲಿ ಸರಕಾರ ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲು ಹಣ ಬಿಡುಗಡೆ ಮಾಡಿ ಎಲ್ಲ ರೀತಿಯಿಂದಲೂ ಕೆಲಸ ಮಾಡಿತ್ತು. ಆದರೆ ಅದು ಲೋಕಾರ್ಪಣೆಯಾಗಿಲ್ಲ. ಈ ಕಾರ್ಯ ರಾಜ್ಯಾದ್ಯಂತ ನಡೆದಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಕ್ಕೆ ಇದು ಅನಿವಾರ್ಯವಾಗಿದ್ದರಿಂದ ಅದನ್ನು ಮಾಡಿದೆ. ಆದರೆ ಕಳೆದ ವರ್ಷ ಸಪ್ಟಂಬರ್ ನಲ್ಲಿ ತಯಾರಾಗಿರುವ ಆಕ್ಸಿಜನ್ ವ್ಯವಸ್ಥೆಗಳು ಇದುವರೆಗೂ ಲೋಕಾರ್ಪಣೆಯಾಗಿಲ್ಲ ಅವು ಕೂಡಲೇ ಲೋಕಾರ್ಪಣೆಯಾಗಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದ್ದಾರೆ.
ಅವರು ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ 90 ರಷ್ಟು ತಾಂತ್ರಿಕ ಕೆಲಸಗಳಾಗಿ ಅನೇಕ ತಿಂಗಳುಗಳು ಕಳೆದರೂ ಲೋಕಾರ್ಪಣೆಯಾಗದಿರುವುದು ದುರಾದುಷ್ಟಕರ. ಇದರ ಬಗ್ಗೆ ನಾನು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆದಿದ್ದೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೂ ಮತ್ತು ಇದಕ್ಕೆ ಸಂಬಂಧ ಪಟ್ಟ ಮಂತ್ರಿಗಳಿಗೂ ಒತ್ತಾಯಿಸಿದ್ದೇನೆ.
ಇದನ್ನೂ ಓದಿ : ಬಿಜೆಪಿಯವರು ಎಷ್ಟೇ, ಏನೇ ಮುಚ್ಚಿಟ್ಟರೂ ನಮಗೆ ಮಾಹಿತಿ ದೊರಕುತ್ತದೆ : ಡಿಕೆಶಿ
ಮೂರನೇ ಅಲೆ ಆರಂಭದಿಂದ ಮುಂದೆ ತುಂಬಾ ತೊಂದರೆ ಆಗಬಹುದೆಂಬ ತಜ್ಞರು ನೀಡಿರುವ ವರದಿಯನ್ನು ನೋಡಿದರೆ ಇಂತಹ ಸೌಲಭ್ಯಗಳು ಅತ್ಯಂತ ಅವಶ್ಯವಾಗಿದೆ. ಆ ದೃಷ್ಠಿಯಿಂದ ಬನಹಟ್ಟಿ ಮತ್ತು ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ತಯಾರಿರುವ ಸೆಂಟ್ರಲ್ ಆಕ್ಸಿಜನ್ ಸಿಸ್ಟಿಮ್‌ನ್ನು ತಾಂತ್ರಿಕವಾಗಿ ಪರಿಶೀಲಿಸಿ, ಪ್ರಮಾಣಿಕರಿಸಬೇಕು. ಜೊತೆಗೆ ಆಕ್ಸಿಜನ್ ಸರಬರಾಜು ಹಾಗೂ ಉತ್ತಮ ವೈದ್ಯರನ್ನು ನೇಮಿಸುವ ಕೆಲಸವಷ್ಠೇ ಬಾಕಿ ಇರುತ್ತದೆ. ಈಗ ಅದು ಪರಿಪೂರ್ಣವಾಗಿ ಜನಗಳಿಗೆ ಉಪಯುಕ್ತವಾಗಿ ಸಾರ್ಥಕತೆ ಕಾಣಬೇಕಾದರೆ ಸರಕಾರ ಸಹಾಯ ಹಸ್ತ ನೀಡಲೇಬೇಕು. ಮತ್ತು ತೇರದಾಳ ಮತಕ್ಷೇತ್ರದ ಇದೀಗ ಬನಹಟ್ಟಿಯಲ್ಲಿ ಇದೀಗ ತುರ್ತು ಪರಸ್ಥಿತಿಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಪ್ರಾರಂಭಿಸಿದ್ದು, ಅದರ ಜೊತೆ ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಆದಷ್ಟು ಬೇಗನೆ ಆಕ್ಸಿಜನ್ ಬೆಡ್ ವ್ಯವಸ್ಥೆ ಪ್ರಾರಂಭಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.