ಮಂಗಳೂರು : ಅಲ್ಪಸಂಖ್ಯಾಕರ ಸಭೆಯೊಂದರಲ್ಲಿ, “ಬಿಜೆಪಿಯವರಿಗೆ ಹಾಗೂ ಕಾಂಗ್ರೆಸಿಗರಿಗೆ ಅಹಂಕಾರ’ ಎಂಬ ಮೂಡುಬಿದಿರೆ ಶಾಸಕರ ಹೇಳಿಕೆ ಈಗ ವೈರಲ್ ಆಗುತ್ತಿದೆ.
ಈ ಸಭೆ ಕೆಲವು ದಿನಗಳ ಹಿಂದೆ ಮೂಡುಬಿದಿರೆಯಲ್ಲಿ ನಡೆದಿದೆ. ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, “ಮುಸಲ್ಮಾನರು, ಕ್ರೈಸ್ತರು ನಮಗೆ ಮತ ಹಾಕುವುದಿಲ್ಲ, ಅವರಿಗೆ ಯಾಕೆ ಕೆಲಸ ಮಾಡಿಕೊಡಬೇಕು ಎಂದು ಬಿಜೆಪಿಯವರು ಅಹಂಕಾರದ ಮಾತಾಡುತ್ತಾರೆ. ಇದನ್ನು ಬೇರೆಯವರು ಹೇಳುವುದಿಲ್ಲ, ನಾನು ನೇರ ನಡೆಯವನು, ಹೇಳುತ್ತೇನೆ’ ಎಂದಿದ್ದಾರೆ.
ಕಾಂಗ್ರೆಸ್‌ನವರೂ ಮುಸ್ಲಿಮರು, ಕ್ರೈಸ್ತರೂ ನಮಗೇ ಮತ ಹಾಕಬೇಕು ವಿನಾ ಬೇರೆಯವರಿಗಲ್ಲ ಎನ್ನುತ್ತಾರೆ. ಈ ಧರ್ಮದವರನ್ನು ಅವರ ಕೂಲಿಯಾಳುಗಳಂತೆ ನೋಡು ತ್ತಾರೆ, ಅಂಥ ಅಹಂಕಾರ ಕಾಂಗ್ರೆಸಿ ನವರಿಗೆ ಇದೆ. ನಮ್ಮ ಪಾರ್ಟಿ ಯವರಿಗೂ ಅಹಂಕಾರ ಇದೆ. ಆದರೆ ಇವೆರಡಕ್ಕೂ ವಿರುದ್ಧವಾಗಿ ನಾನು ಕೆಲಸ ಮಾಡುತ್ತೇನೆ ಎಂದು ಕೋಟ್ಯಾನ್ ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
“ನನ್ನ ಇಡೀ ಕ್ಷೇತ್ರ ನೋಡಿ, ಮಸೀದಿ ಚರ್ಚ್, ಬಸದಿಗೆ ತಾರತಮ್ಯ ಇಲ್ಲದೆ ಮಸೀದಿ, ಮದ್ರಸಾ, ರಸ್ತೆಗೆ ಅನುದಾನ ಕೊಟ್ಟಿದ್ದೇನೆ, ಇಂಟರ್‌ಲಾಕ್ ಹಾಕಿಸಿಕೊಟ್ಟಿದ್ದೇನೆ’ ಎಂದು ಶಾಸಕರು ಹೇಳಿಕೊಂಡಿರುವುದು ವೀಡಿಯೋದಲ್ಲಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಶಾಸಕ ಕೋಟ್ಯಾನ್ ಅವರ ಈ ಹೇಳಿಕೆ ಬಿಜೆಪಿಯಲ್ಲಿ ಹಲವು ಬಗೆಯ ಸಂಚಲನವನ್ನು ಸೃಷ್ಟಿಸಿದ್ದು, ಇರಿಸುಮುರಿಸಿಗೂ ಕಾರಣವಾಗಿದೆ.