Advertisement

Ullal: ಸಿಸಿಬಿ ಪೊಲೀಸರ ದಿಢೀರ್‌ ದಾಳಿ; ಮರಳು, ನಾಲ್ಕು ನಾಡದೋಣಿ ವಶಕ್ಕೆ

12:42 AM Mar 21, 2024 | Team Udayavani |

ಉಳ್ಳಾಲ: ಸೋಮೇಶ್ವರ ಉಚ್ಚಿಲದ ನಾಗತೋಟದಲ್ಲಿನ ಖಾಸಗಿ ಜಾಗದ ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದ ಮರಳು ಮತ್ತು ಹೊಳೆಯಲ್ಲಿ ಮರಳು ಸಾಗಾಟ ನಡೆಸುತ್ತಿದ್ದ ನಾಲ್ಕು ನಾಡದೋಣಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಹೊಳೆಯಲ್ಲಿ ಸಾಗಾಟ ನಡೆಸಿ ನಾಗತೋಟ ನಿವಾಸಿ ಮಹಮ್ಮದ್‌ ಆಲಿ ಅವರ ಖಾಸಗಿ ಜಮೀನಿನಲ್ಲಿ ದಾಸ್ತಾನು ಇರಿಸಲಾಗುತ್ತಿತ್ತು.ಈ ಮರಳನ್ನು ಮಧ್ಯ ರಾತ್ರಿ ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿತ್ತು. ಈ ಮರಳು ಮಾಫಿಯಾ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಉಳ್ಳಾಲ ಠಾಣೆಗೆ ದೂರು ನೀಡಿದ್ದರೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮರಳು ಅಡ್ಡೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ದಾಳಿ ಬಳಿಕ ಮಾಹಿತಿ
ಸಿಸಿಬಿ ಪೊಲೀಸರೊಂದಿಗೆ ಗಣಿ, ಭೂ ವಿಜ್ಞಾನ ಅಧಿಕಾರಿಗಳ ತಂಡ ಬುಧವಾರ ನಾಗತೋಟದ ಅಕ್ರಮ ಮರಳು ಅಡ್ಡೆಗೆ ದಿಢೀರ್‌ ದಾಳಿ ನಡೆಸಿದ ಬಳಿಕ ಉಳ್ಳಾಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಐವರು ತಲೆಮರೆಸಿಕೊಂಡಿದ್ದಾರೆ. ವಶ ಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಮರಳು ಮತ್ತು ನಾಡ ದೋಣಿಗಳನ್ನು ಪೊಲೀಸರು ಭೂ ಮತ್ತು ಗಣಿ ವಿಜ್ಞಾನ ಇಲಾಖಾಧಿರಿಗಳಿಗೆ ಹಸ್ತಾಂತರಿಸಿದ್ದಾರೆ. ಅಕ್ರಮ ಮರಳನ್ನು ದಾಸ್ತಾನು ಇರಿಸಲು ಸಹಕರಿಸುತ್ತಿರುವವರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next