ಉಳ್ಳಾಲ: ಹೆದ್ದಾರಿ ಬದಿಯ ತಡೆಬೇಲಿಗೆ ಆಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ ವೃದ್ಧೆ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಉಚ್ಚಿಲದಲ್ಲಿ ಮೇ 21ರಂದು ಮುಂಜಾನೆ ನಸುಕಿನ ಜಾವ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಜತ್ತೂರು ನಿವಾಸಿ ಬಿ. ಫಾತಿಮಾ(85) ಮೃತಪಟ್ಟ ವೃದ್ಧೆ. ಫಾತಿಮಾ ಅವರು ತನ್ನ ಮಗ ಮೂಸ(50), ಮೊಮ್ಮಗ ಮುಸ್ತಫಾ(24) ಅವರೊಂದಿಗೆ ಶನಿವಾರ ಮಂಗಳೂರಿನ ಅಡೂxರಿಗೆ ತೆರಳಿ ಸಂಬಂಧಿಕರೋರ್ವರ ಶವಸಂಸ್ಕಾರ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ರವಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿದ್ದೆ ಮಂಪರಿನಿಂದ ಅನಾಹುತ
ಫಾತಿಮಾ ಆಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದಿದೆ. ಘಟನೆಯನ್ನು ಕಂಡ ವಾಹನ ಸವಾರರೊಬ್ಬರು ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಟ್ರಾಫಿಕ್ ಪೊಲೀಸರಲ್ಲಿ ವಿಚಾರ ತಿಳಿಸಿದ್ದಾರೆ. ತತ್‌ಕ್ಷಣ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬಂದಿ ಮಹೇಶ್ ಆಚಾರ್ಯ ಮತ್ತು ವಿಟಲ್ ದಾಸ್ ಅವರು ಕಬ್ಬಿಣದ ಸಲಾಕೆಯ ಮಧ್ಯದಲ್ಲಿ ಸಿಲುಕಿದ್ದ ಫಾತಿಮಾರನ್ನು ಹೊರಗೆಳೆದು ಮೂವರನ್ನು ತಮ್ಮ ಇಲಾಖಾ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಇವರಲ್ಲಿ ಫಾತಿಮಾ ಮೃತಪಟ್ಟಿದ್ದಾರೆ.