Advertisement

ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ, ಹೆದ್ದಾರಿ ಇಲಾಖೆ

12:36 PM Aug 08, 2022 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥವಾಗಿ ಹಲವು ವರ್ಷಗಳೇ ಕಳೆದರೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದೆಡೆ ಸರ್ವಿಸ್‌ ರಸ್ತೆಗಳ ಸಮಸ್ಯೆ, ಇನ್ನೊಂದೆಡೆ ಘನ ವಾಹನಗಳು ಸಂಚರಿಸುವ ಭರದಲ್ಲಿ ರಸ್ತೆಯ ನೀರು ದ್ವಿಚಕ್ರ ವಾಹನಗಳಿಗೆ ಎರಚಿ ಅಪಘಾತಗಳು ಸಂಭವಿಸುತ್ತಿರುವುದು ಸಾಮಾನ್ಯ.

Advertisement

ಎರಡು ವಾರಗಳ ಹಿಂದೆ ಸುರಿದ ಭಾರೀ ಮಳೆಗೆ ಹೆದ್ದಾರಿ ಸಂಪೂರ್ಣ ಗುಂಡಿ ಬಿದಿದ್ದು, ಇದರಿಂದ ಅನೇಕ ಮಂದಿ ವಾಹನ ಸವಾರರು ಅಪಘಾತ ಉಂಟಾಗಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ಬೃಹತ್‌ ಗಾತ್ರದ ಹೊಂಡಕ್ಕೆ ಬಿದ್ದು ಸ್ಕೂಟರ್‌ ಸವಾರೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ ಬಲಗೈ ಮೂಳೆ ಮುರಿತಕ್ಕೊಳಗಾಗಿ, ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಘಟನೆಯಿಂದ ವಿದ್ಯಾರ್ಥಿನಿ ಯುಜಿಸಿ ಪರೀಕ್ಷೆ ಸೇರಿದಂತೆ ಒಂದು ಸೆಮಿಸ್ಟರ್‌ ಶಿಕ್ಷಣದಿಂದ ವಂಚಿತಳಾಗಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಹೆದ್ದಾರಿ ಇಲಾಖೆ ಸೇತುವೆಯ ಹೊಂಡವನ್ನು ಮುಚ್ಚಿ ಕೈತೊಳೆದುಕೊಂಡಿತ್ತು. ಆದರೆ ಉಳಿದ ಗುಂಡಿಗಳನ್ನು ಮುಚ್ಚದೇ ಇದೀಗ ನಿರಂತರ ಅಪಘಾತಕ್ಕೆ ಕಾರಣವಾಗುತ್ತಿದ್ದು, ನಿತ್ಯ ಸಂಚಾರ ಮಾಡುವ ದ್ವಿಚಕ್ರ ವಾಹನ ಸವಾರಿಗೆ ರಾಷ್ಟ್ರೀಯ ಹೆದ್ದಾರಿ 66 ಮರಣಗುಂಡಿಯಂತೆ ಭಾಸವಾಗುತ್ತಿದೆ.

ಹೆದ್ದಾರಿ ಉದ್ದಕ್ಕೂ ಮರಣಗುಂಡಿಗಳು

ಜುಲೈ ತಿಂಗಳಲ್ಲಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರಿನಿಂದ ತಲಪ್ಪಾಡಿ ವರೆಗೆ ಗುಂಡಿಗಳು ಸೃಷ್ಟಿಯಾಗಿವೆ.

Advertisement

ನೇತ್ರವಾತಿ ಸೇತುವೆಯಿಂದ ಆಡಂಕುದ್ರು, ಕಲ್ಲಾಪು, ಕೆರೆಬೈಲ್‌, ತೊಕ್ಕೊಟ್ಟು ಜಂಕ್ಷನ್‌ ಬಳಿ ಗುಂಡಿಗಳು ಹೆಚ್ಚಾಗಿದ್ದು, ಇದೀಗ ಈ ಗುಂಡಿಗಳು ನೀರು ತುಂಬಿ ದ್ವಿಚಕ್ರ ಸವಾರರಿಗೆ ಮರಣ ಗುಂಡಿಯಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಸರಿಯಾದ ವಿದ್ಯುತ್‌ ದೀಪಗಳು ಇಲ್ಲದೆ ರಾತ್ರಿ ವೇಳೆಯೇ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಹೆದ್ದಾರಿ ಬದಿ ಕೆಲವೆಡೆ ಚರಂಡಿ ನಿರ್ಮಾಣವಿಲ್ಲದೆ, ಇನ್ನು ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ರಸ್ತೆಯಲ್ಲೇ ನಿಂತು ವಾಹನ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಕೂದಳೆಯ ಅಂತರದಲ್ಲಿ ಪಾರಾಗುತ್ತಿರುವ ಸವಾರರು

ಕಲ್ಲಾಪುವಿನಿಂದ ತೊಕ್ಕೊಟ್ಟು ಸಂಪರ್ಕಿಸುವ ನಾಗನಕಟ್ಟೆ ಎದುರು ಭಾಗದ ಜೆನರಿಕ್‌ ಔಷದ ಕೇಂದ್ರದ ಬಳಿಯ ಎರಡು ಗುಂಡಿಗಳಿಗೆ ದ್ವಿಚಕ್ರ ವಾಹನಗಳು ಬಿದ್ದು ಸುಮರು 10ಕ್ಕೂ ಹೆಚ್ಚು ಅಪಘಾತಗಳು ಎರಡು ದಿನಗಳಲ್ಲಿ ಸಂಭವಿಸಿವೆ. ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳೀಯ ಔಷಧ ಕೇಂದ್ರದಲ್ಲಿ ಬ್ಯಾಂಡೇಜ್‌ ಸುತ್ತಿಕೊಂಡು ಹೆದ್ದಾರಿ ಇಲಾಖೆಗೆ ಹಿಡಿಶಾಪ ಹಾಕಿಕೊಂಡು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸುವಂತೆ ಎರಡು ಘಟನೆಗಳಲ್ಲಿ ದ್ವಿಚಕ್ರ ವಾಹನಗಳು ಅಪಘಾತದ ಸಂದರ್ಭದಲ್ಲಿ ಹಿಂದಿನಿಂದ ಬರುವ ಘನ ವಾಹನಗಳು ಹಠಾತ್‌ ಬ್ರೇಕ್‌ ಹಾಕಿದ್ದರಿಂದ ವಾಹನ ಸವಾರರ ಜೀವ ಉಳಿದಿತ್ತು. ಘಟನೆಯ ಬಳಿಕ ಎರಡು ಗುಂಡಿಗಳಿಗೆ ತೆಂಗಿನ ಗರಿಯನ್ನು ಇಟ್ಟು ಅಪಘಾತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಬಳಿಕ ಅಪಘಾತಗಳು ಕಡಿಮೆಯಾಗಿದ್ದು, ಹೆದ್ದಾರಿ ಇಲಾಖೆಯಾಗಲಿ ಕಾಮಗಾರಿ ನಡೆಸುವ ಸಂಸ್ಥೆಯಾಗಲಿ ಈವರೆಗೂ ಸ್ಥಳ ಪರಿಶೀಲನೆ ನಡೆಸಿಲ್ಲ.

ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ

ಸಾಮಾನ್ಯವಾಗಿ ಬಸ್‌ನಲ್ಲಿ ಓಡಾಡುತ್ತಿದ್ದ ನಾನು ಅಂದು ಪ್ರಾಜೆಕ್ಟ್ ವರ್ಕ್‌ ಇದ್ದ ಕಾರಣ ಕಾಲೇಜಿಗೆ ದ್ವಿಚಕ್ರ ವಾಹನ ತಂದಿದ್ದೆ. ಅಪಘಾತದಿಂದ ಆ. 12ರಂದು ಯುಜಿಸಿ ಪರೀಕ್ಷೆಯಿದ ವಂಚಿತಳಾಗುತ್ತಿದ್ದು, ಆಂತರಿಕ ಪರೀಕ್ಷೆಗೂ ಗೈರು ಹಾಜರಾಗುವ ಸಂಕಷ್ಟ ಒದಗಿದೆ. ಈವರೆಗೆ ಶಸ್ತ್ರಚಿಕಿತ್ಸೆಗೆ 65,000 ರೂ. ಖರ್ಚನ್ನು ಹೆತ್ತವರು ಭರಿಸಿದ್ದಾರೆ. ಆಸ್ಪತ್ರೆ ಬಿಲ್‌ ಇನ್ನು ಬರಬೇಕಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ. ಪ್ರಕರಣ ಯಾರ ಮೇಲೆ ದಾಖಲಿಸುವುದು ಎಂಬುದು ಗೊಂದಲದಲ್ಲಿರುವುದರಿಂದ ಅದನ್ನು ಕೈ ಬಿಟ್ಟಿದ್ದೇವೆ ಎನ್ನುತ್ತಾರೆ ಗಾಯಾಳು ವಿದ್ಯಾರ್ಥಿನಿ ನಿಶ್ಮಿತಾ.

ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ: ದ.ಕ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಪ್ರತೀ ತಿಂಗಳು ಕರೆಯುವ ಪ್ರಗತಿಪರಿಶೀಲನ ಸಭೆಗೆ ಸತತವಾಗಿ ಗೈರು ಹಾಜರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಸಚಿವರು ಜಿಲ್ಲೆಗೆ ಬಂದಾಗ ಪ್ರಾಕೃತಿಕ ವಿಕೋಪ ಸಭೆಗೂ ಗೈರುಹಾಜರಾಗಿದ್ದಾರೆ. ಜಿಲ್ಲಾಡಳಿತಕ್ಕೆ ಮತ್ತು ಸರಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಹಿಡಿತವಿಲ್ಲದ ಕಾರಣ ಹೆದ್ದಾರಿ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಅಸಡ್ಡೆ ತೋರಿಸಿದ್ದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಅಧಿಕಾರಿಗಳು ಎಚ್ಚೆತ್ತಿದ್ದರು. ಹೆದ್ದಾರಿ ಗುಂಡಿಯಿಂದ ಅಪಘಾತ ಸಂಭವಿಸುತ್ತಿರುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮಕ್ಕೆ ಆಗ್ರಹಿಸುತ್ತೇನೆ. – ಯು.ಟಿ. ಖಾದರ್‌, ಶಾಸಕರು, ಮಂಗಳೂರು ವಿಧಾಸಭೆ ಕ್ಷೇತ್ರ

-ವ‌ಸಂತ ಎನ್‌. ಕೊಣಾಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next