ಉಳ್ಳಾಲ: ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಖಂಡಿಕ ಎಂಬಲ್ಲಿ ಡಿ.7ರ ಶನಿವಾರ ತಡರಾತ್ರಿ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿ ಆಕಸ್ಮಿಕ ಸಂಭವಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮಕ್ಕಳ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಡಿ. 12ರ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಪತ್ನಿ ಖುಬ್ರ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಕಳೆದ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಿಂದ ಈ ದುರಂತ ಸಂಭವಿಸಿತ್ತು. ಇದರಿಂದ ಮನೆಯೊಡತಿ ಖುಬ್ರಾ ಹಾಗೂ ಅವರ ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಗಂಭೀರ ಗಾಯಗೊಂಡಿದ್ದರು.
ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮನೆಯೊಡತಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರ ಕಲ್ಕಟ್ಟ ಖಂಡಿಕ ಮನೆಯಲ್ಲಿ ನಡೆಯಲಿದೆ.