ಉಳ್ಳಾಲ: ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಉಳ್ಳಾಲ ನಗರ ಪಂಚಾಯತ್, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲದಿದ್ದರೂ ಮನೆಗಳಲ್ಲಿ ತ್ಯಾಜ್ಯ ವಿಲೇವಾರಿ ಭಾಗಶ: ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ ಕೆಲವು ಗ್ರಾಮ ಪಂಚಾಯತ್‌ಗಳು ತ್ಯಾಜ್ಯ ಘಟಕ ನಿರ್ಮಾಣ ಮಾಡಿ ಮನೆಗಳಿಂದ ತ್ಯಾಜ್ಯ ಸಂಗ್ರಹ ನಡೆಸುತ್ತಿದ್ದು, ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಈ ಕಾರ್ಯ ಇನ್ನೂ ಆರಂಭವಾಗಬೇಕಾಗಿದೆ. ಆದರೆ ರಸ್ತೆ ಬದಿಯ ತ್ಯಾಜ್ಯಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ಹೆದ್ದಾರಿ, ಮುಖ್ಯ ರಸ್ತೆ ಮತ್ತು ಒಳರಸ್ತೆಗಳ ಬದಿಯಲ್ಲಿ ನಿರಂತರವಾಗಿ ಪ್ಲಾಸ್ಟಿಕ್ ತ್ಯಾಜ್ಯ, ಕೋಳಿ ತ್ಯಾಜ್ಯ, ಮನೆಯ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಎಸೆಯಲಾಗುತ್ತಿದೆ. ಪಾಸ್ಟಿಕ್ ತ್ಯಾಜ್ಯ ದನಗಳಿಗೆ ಆಹಾರವಾಗುವುದರ ಜತೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ.
ನಿರ್ವಸತಿ ಪ್ರದೇಶದಲ್ಲಿ ತ್ಯಾಜ್ಯ ಮರು ವಿಂಗಡಣೆ ಆಗ್ರಹ
ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಬೈಲ್ ಬಳಿಯ ಗೇರು ಕೃಷಿ ಅಧ್ಯಯನ ಕೇಂದ್ರದ ಬಳಿ ಕಸ ವಿಂಗಡಣೆ ಮಾಡುವ ಸ್ಥಳದಲ್ಲಿಯೇ ಪ್ರತೀ ದಿನ ತ್ಯಾಜ್ಯ ರಾಶಿ ಬೀಳುತ್ತಿದ್ದು, ಸ್ಥಳೀಯವಾಗಿ ಜನರಿಗೆ ತೊಂದರೆಯಾಗಿದೆ. ತ್ಯಾಜ್ಯರಾಶಿಯಲ್ಲಿ ಬಿದ್ದಿರುವ ಆಹಾರವನ್ನು ತಿನ್ನಲು ಬರುವ ಬೀದಿ ನಾಯಿಗಳಿಂದ ದ್ವಿಚಕ್ರ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿವೆ. ಬೀದಿ ನಾಯಿಗಳು ಅಡ್ಡ ಬಂದು ಹಲವು ಬಾರಿ ಅಪಘಾತಗಳು ನಡೆದಿವೆೆ. ತ್ಯಾಜ್ಯ ಮರು ವಿಂಗಡಣೆ ಮಾಡುವ ಕಾರ್ಯವನ್ನು ಒಳಪ್ರದೇಶಗಳಲ್ಲಿ ಜನವಸತಿ ಇಲ್ಲದ ಪ್ರದೇಶದಲ್ಲಿ ಉಳ್ಳಾಲ ನಗರಸಭೆ ನಡೆಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.