Advertisement

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

04:23 PM Oct 17, 2024 | Team Udayavani |

ಉಳ್ಳಾಲ: ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆಯ ಮುಖಂಡನೊಬ್ಬನಿಗೆ ಕೇರಳ ಮೂಲದ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ನಡುರಾತ್ರಿಯೇ ಠಾಣೆಗೆ ಮುತ್ತಿಗೆ ಹಾಕಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬಜರಂಗದಳದ ಉಳ್ಳಾಲ ನಗರ, ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಮುಖಂಡ. ಹಲ್ಲೆ ನಡೆಸಿದ  ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಆಸಿಫ್(33) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ವಿವರ: ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರ ಬುಧವಾರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಸಣ್ಣ ಅಪಘಾತ ನಡೆದಿದೆ.

ಈ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರ ಅಸಿಫ್, ಶರತ್ ಅವರಿಗೆ ಹಲ್ಲೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಹಲ್ಲೆ ವಿಚಾರದಲ್ಲಿ ಶರತ್ ಅವರ ಸ್ನೇಹಿತ ಅರ್ಜುನ್ ಮಾಡೂರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾಏಕಿ ಒಳ ನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಇನ್ಸ್ ಪೆಕ್ಟರ್ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೊರಗಡೆ ತೆರಳಿದ್ದರು.

ಘಟನೆಯ ಸಂದರ್ಭದಲ್ಲಿ ಅರ್ಜುನ್ ಸ್ನೇಹಿತರು ಆಸಿಫ್ ನನ್ನು ತಡೆದಿದ್ದು, ಎಚ್ಚೆತ್ತ ಪೊಲೀಸರು ಕೂಡಲೇ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ದೃಶ್ಯಗಳು ಠಾಣಾ ಇನ್ಸ್ ಪೆಕ್ಟರ್ ಅವರ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಹಲ್ಲೆಗೈದ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದಾರೆ. ಅರ್ಜುನ್ ಗೆ ಹಲ್ಲೆ ನಡೆಸಿದ ಆರೋಪಿ ಆಸಿಫ್ ನನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ  ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್  ಏರ್ಪಡಿಸಿದ್ದಾರೆ. ಠಾಣೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ ಕುತ್ತಾರು ಅವರು ಆರೋಪಿ ಆಸಿಫ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಠಿಣ ಕ್ರಮಕ್ಕೆ ಅರುಣ್ ಪುತ್ತಿಲ ಆಗ್ರಹ: ಹಲ್ಲೆಯ ಸುದ್ಧಿ ತಿಳಿಯುತ್ತಿದ್ದಂತೆ ಅರುಣ್ ಪುತ್ತಿಲ ಅವರು ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ. ಪುತ್ತಿಲ ಆಗಮಿಸುತ್ತಿದ್ದಂತೆ ಠಾಣೆಯ ಮುಂದೆ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಜೈಕಾರ ಘೋಷಣೆಗಳನ್ಬು ಕೂಗಿದ್ದಾರೆ. ಠಾಣೆಯೊಳಗಡೆಯೇ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರನ್ನು ಪುತ್ತಿಲ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next