ಉಳ್ಳಾಲ: ನಾಟಿ ಕಾರ್ಯಕ್ಕೆ ಸ್ಥಳೀಯರು ಸಿಗದೆ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ಒಡಿಶಾ ಕಾರ್ಮಿಕರ ಸಹಕಾರದಿಂದ ಭತ್ತದ ಕೃಷಿ ಮಾಡುವಲ್ಲಿ ಕುತ್ತಾರು ಬಟ್ಟೆದಡಿ ಮೂಲದ ಕೃಷಿಕರೊಬ್ಬರು ಯಶಸ್ವಿಯಾಗಿದ್ದಾರೆ.
ಕಳೆದ 2 ವರ್ಷಗಳಿಂದ ಹಡಿಲು ಭೂಮಿಯಲ್ಲಿ ಕೃಷಿ ನಡೆಸುತ್ತಿರುವ ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ ಭತ್ತದ ಕೃಷಿಗೆ ನೀಡುವ ಸಹಾಯಧನವನ್ನು ಒರಿಸ್ಸಾ ಮೂಲದ ಕಾರ್ಮಿರಿಗೆ ಕೃಷಿ ಕಾರ್ಯಕ್ಕೆ ಗೌರವ ಧನವಾಗಿ ನೀಡಿ ಸಂಘದ ಸಹಾಯಧನ ವ್ಯರ್ಥವಾಗದಂತೆ ನೋಡಿಕೊಂಡಿದ್ದು, ಕೃಷಿ ಕಾಯಕ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ವಿನೂತನವಾಗಿ ಆಚರಿಸಿದ್ದಾರೆ.
ಕುತ್ತಾರು ಬಟ್ಟೆದಡಿ ನಿವಾಸಿ ಕರುಣಾಕರ್ ಕಂಪ ಅವರೇ ಒಡಿಶಾ ಕಾರ್ಮಿಕರ ಸಹಯೋಗದೊಂದಿಗೆ ಭತ್ತದ ಕೃಷಿ ಮಾಡಿರುವ ಕೃಷಿಕ. ಒಂದು ಎಕರೆ ಗದ್ದೆ ಹಲವು ವರುಷಗಳಿಂದ ಕೃಷಿ ಕಾರ್ಮಿಕರು ಸಿಗದೆ ಹಡಿಲು ಬಿದ್ದಾಗ ತಾನು ಕೆಲಸ ನಿರ್ವಹಿಸುತ್ತಿದ್ದ ಫ್ಲೆ$çವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಒರಿಸ್ಸಾ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಕಾರ್ಯವನ್ನು ಕಳೆದೆರಡು ವರುಷದಿಂದ ಯಶಸ್ವಿಯಾಗಿ ಭತ್ತದ ಕೃಷಿಯನ್ನು ನಡೆಸುತ್ತಿದ್ದಾರೆ.
15 ವರ್ಷಗಳಿಂದ ಜತೆಗೆ ಇದ್ದ ಒಡಿಶಾ ಕಾರ್ಮಿಕರ ಜತೆಗೆ ಕರುಣಾಕರ್ ನಾಟಿ ಕಾರ್ಯ ನಡೆಸಲು ಆರ್ಥಿಕ ತೊಂದರೆ ಕುರಿತು ಪ್ರಸ್ತಾಪಿಸಿದ್ದರು. ಇದನ್ನು ಮನಗಂಡ ತಮ್ಮ ಸಹೋದ್ಯೋಗಿ ಕಾರ್ಮಿಕರು ಗೆಳೆಯನಿಗಾಗಿ ನಾಟಿ ಕಾರ್ಯ ನಡೆಸುತ್ತೇವೆ ಎಂದು ಕಳೆದೆರಡು ವರುಷಗಳಿಂದ ಭತ್ತದ ಕೃಷಿ ಕಾರ್ಯವನ್ನು ನಡೆಸಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಫ್ಯಾಕ್ಟರಿಗೆ ರಜೆಯಿರುವುದರಿಂದ ಗೆಳೆಯ, ಸಹೋದ್ಯೋಗಿ ಕರುಣಾಕರ್ ಅವರ ಸಹಾಯಕ್ಕೆ ಬಂದಿದ್ದೆವು. ಕಳೆದ ವರ್ಷದಂತೆ ಈ ಬಾರಿಯೂ ನಾಟಿಯಲ್ಲಿ ಭಾಗವಹಿಸುತ್ತಿದ್ದೇವೆ. ಒರಿಸ್ಸಾದಲ್ಲಿಯೂ 2-3 ಎಕರೆ ಜಮೀನಿನಲ್ಲಿ ಗದ್ದೆ ಕೆಲಸಗಳನ್ನು ನಡೆಸುತ್ತೇವೆ, ಕೃಷಿ ಕೆಲಸವಿಲ್ಲದ ಸಂದರ್ಭ ಫ್ಯಾಕ್ಟರಿ ಕೆಲಸಕ್ಕೆ ಬರುತ್ತಿದ್ದೇವೆ. ಸಹಾಯ ಕೇಳಿದ್ದಾಗ ಇಲ್ಲ ಅನ್ನದೇ ರಜೆಯಿದ್ದಾಗೆಲ್ಲಾ ಕೆಲಸದಲ್ಲಿ ಭಾಗಿಯಾಗಿದ್ದೆವು.
-ಭಾಗೀರಥಿ ದಾಸ್, ಕಾರ್ಮಿಕರು, ಒಡಿಶಾ
ನಾಟಿ ಕಾರ್ಯಕ್ಕೆ ಜನ ಸಿಗದೆ ಇದ್ದಾಗ ಗದ್ದೆಯನ್ನು ಹಡಿಲು ಬಿಟ್ಟಿದ್ದೆವು. ಈ ವಿಚಾರವನ್ನು ನನ್ನ ಸಹೋದ್ಯೋಗಿಗಳಲ್ಲಿ ತಿಳಿಸಿದಾಗ ಕಳೆದ 2 ವರುಷಗಳಿಂದ ಬಿಡುವಿನ ಸಂದರ್ಭದಲ್ಲಿ ಬಂದು ಕೃಷಿಗೆ ಸಹಾಯ ಮಾಡುತ್ತಿದ್ದಾರೆ. ಕೋಟೆಕಾರು ಬ್ಯಾಂಕ್ ನೀಡಿದ ಪ್ರೋತ್ಸಾಹ ಧನವನ್ನು ಅವರಿಗೆ ಗೌರವ ಧನವಾಗಿ ನೀಡಿದ್ದೇನೆ.
-ಕರುಣಾಕರ ಕಂಪ, ಕೃಷಿಕರು, ಗದ್ದೆ ಮಾಲಕರು