ಉಳ್ಳಾಲ: ಸಮುದ್ರ ತಟದಿಂದ ಅಕ್ರಮ ಮರಳು ಸಾಗಾಟ ತಡೆಯಲು ಸೋಮೇಶ್ವರ ಮೂಡಾ ಲೇಔಟ್ ಬಳಿ ಜಿಲ್ಲಾಡಳಿತ ಹಾಕಿದ್ದ ಸಿಸಿ ಕೆಮರಾವನ್ನು ಎರಡನೇ ಬಾರಿಗೆ ಕೆಡವಲು ಯತ್ನಿಸಿದ ಘಟನೆ ನಡೆದಿದ್ದು, ಗ್ರಾಮ ಲೆಕ್ಕಾಧಿಕಾರಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಲವು ತಿಂಗಳ ಹಿಂದೆ ತಂಡವೊಂದು ಸೋಮೇಶ್ವರ ಬೀಚ್‌ನಲ್ಲಿ ಅಳವಡಿಸಿದ್ದ ಸಿಸಿ ಕೆಮರಾವನ್ನು ಲಾರಿ ಮೂಲಕ ಗುದ್ದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದರು. ನ. 6ರಂದು ನಸುಕಿನ ಜಾವ 2.25ರ ಸುಮಾರಿಗೆ ವ್ಯಾಗನಾರ್ ಕಾರಿನಲ್ಲಿ ಬಂದ ತಂಡದ ಪೈಕಿ ಓರ್ವ ಕೆಳಗಿಳಿದು ಅಕ್ರಮ ಮರಳುಗಾರಿಕೆ ತಡೆಗಟ್ಟಲು ಹಾಕಿದ್ದ ಸಿಸಿ ಕೆಮರಾವನ್ನು ಕೆಡವಲು ಯತ್ನಿಸಿದ್ದಾನೆ.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿ, ಮರಳು ಸಮಿತಿ ಅಧ್ಯಕ್ಷರು, ಆದೇಶದಂತೆ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಒಂದು ವರ್ಷದವರೆಗೆ 24 ಗಂಟೆಗಳ ಕಾಲ ಸಿಸಿ ಟಿವಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಇದೀಗ ಎರಡನೇ ಬಾರಿ ಮರಳು ದಂಧೆಕೋರರು ಸಿಸಿ ಟಿವಿ ಕೆಮರಾ ಕೆಡವಲು ಯತ್ನಿಸಿದ್ದಾರೆ. ಈ ಕುರಿತು ಉಳ್ಳಾಲದ ಗ್ರಾಮಲೆಕ್ಕಾಧಿಕಾರಿ ಸಂತೋಷ್ ಎಂಬವರು ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.