Advertisement

ಉಳ್ಳಾಲ ನಗರಸಭೆ ಚುನಾವಣೆ: ಹೊಸಮುಖಗಳಿಗೆ ಆದ್ಯತೆ  

11:10 AM Aug 26, 2018 | |

ಉಳ್ಳಾಲ: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಉಳ್ಳಾಲ ನಗರಸಭೆ ಚುನಾವಣೆ ಕಾವೇರಿದೆ. ಹಿಂದಿನ ಪುರಸಭೆಯ 27 ಸದಸ್ಯರಲ್ಲಿ 12 ಸದಸ್ಯರು ಮಾತ್ರ ಈ ಬಾರಿಯ ಸ್ಪರ್ಧಾ ಕಣದಲ್ಲಿದ್ದು ಇವರಲ್ಲಿ 6 ಸದಸ್ಯರು ತಾವು ಹಿಂದೆ ಸ್ಪರ್ಧಿಸುತ್ತಿದ್ದ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದರೆ ಉಳಿದ ಆರು ಸದಸ್ಯರು ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ. ಹೆಚ್ಚಿನ ವಾರ್ಡ್‌ಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲಾಗಿದೆ.

Advertisement

ಉಳ್ಳಾಲ ಪುರಸಭೆಯ 27 ಸದಸ್ಯರಲ್ಲಿ 17 ಕಾಂಗ್ರೆಸ್‌, 7 ಬಿಜೆಪಿ, 2 ಪಕ್ಷೇತರ, 1 ಎಸ್‌ ಡಿಪಿಐ ಸದಸ್ಯರಿದ್ದರು. ಉಳ್ಳಾಲ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರಿಂದ 31 ಸದಸ್ಯ ಬಲವನ್ನು ಹೊಂದಲಿದ್ದು, ಕಾಂಗ್ರೆಸ್‌ ಎಲ್ಲ 31 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ಇದರಲ್ಲಿ ಕಾಂಗ್ರೆಸ್‌ನಲ್ಲಿ 9 ಹಾಲಿ ಸದಸ್ಯರು, ಜೆಡಿಎಸ್‌, ಬಿಜೆಪಿ, ಎಸ್‌ಡಿಪಿಐಯಲ್ಲಿ ತಲಾ ಒಬ್ಬರಂತೆ ಸ್ಪರ್ಧೆಯಲ್ಲಿದ್ದಾರೆ.

ಕಾಂಗ್ರೆಸ್‌ನಲ್ಲಿ 6ನೇ ಕಕ್ಕೆತೋಟ ವಾರ್ಡ್‌ನ ಹಾಲಿ ಸದಸ್ಯ ಯು.ಎ. ಇಸ್ಮಾಯಿಲ್‌, 10ನೇ ವಿದ್ಯಾರಣ್ಯ ವಾರ್ಡ್‌ನಲ್ಲಿ ಮಹಮ್ಮದ್‌ ಮುಸ್ತಾಫ, 19ನೇ ಬಬ್ಬುಕಟ್ಟೆ ವಾರ್ಡ್‌ನ ಉಸ್ಮಾನ್‌ ಕಲ್ಲಾಪು, 23ನೇ ಕೃಷ್ಣನಗರ ವಾರ್ಡ್‌ನ ಚಿತ್ರಕಲಾ, ಮುಕ್ಕಚ್ಚೇರಿ 1ರಲ್ಲಿ ಮಹಮ್ಮದ್‌ ಮುಕ್ಕಚ್ಚೇರಿ ಈ ಹಿಂದೆ ಸ್ಪರ್ಧಿಸಿದ್ದ ವಾರ್ಡ್‌ ಗಳಲ್ಲಿ ಸ್ಪರ್ಧೆಯಲ್ಲಿದ್ದರೆ, ಕಾಂಗ್ರೆಸ್‌ನ ಹಾಲಿ ಸದಸ್ಯರಾದ ದಿನೇಶ್‌ ರೈ 16ನೇ ಕೆರೆಬೈಲು ವಾರ್ಡ್‌ನಲ್ಲಿ, ಬಾಝಿಲ್‌ ಡಿ’ಸೋಜಾ 17ನೇ ಪಟ್ಲ ಗಂಡಿ ವಾರ್ಡ್‌ನಲ್ಲಿ ಭಾರತಿ 29ನೇ ಧರ್ಮನಗರ ವಾರ್ಡ್‌ಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಈ ಹಿಂದೆ ಬಿಜೆಪಿ ಹಾಲಿ ಸದಸ್ಯರಾಗಿದ್ದ ಇಸ್ಮಾಯಿಲ್‌ ಪೊಡಿಮೋನು ಈ ಬಾರಿ ಕಾಂಗ್ರೆಸ್‌ನಲ್ಲಿ 9ನೇ ಛೋಟಾ ಮಂಗಳೂರು ವಾರ್ಡ್‌ನಲ್ಲಿ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್‌ನ ಸದಸ್ಯರಾಗಿದ್ದ ಅಶ್ರಫ್‌ ಬಾವ ಜೆಡಿಎಸ್‌ನಲ್ಲಿ ಸ್ಪರ್ಧೆಯಲ್ಲಿದ್ದಾರೆ. ಎಸ್‌ಡಿಪಿಐ ಸದಸ್ಯೆ ಝರಿನಾ ಭಾನು ಈ ಹಿಂದೆ ಸ್ಪರ್ಧಿಸಿದ್ದ ಹಳೆಕೋಟೆ ವಾರ್ಡ್‌ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಮಹಾಲಕ್ಷ್ಮೀ ಅಬ್ಬಕ್ಕನಗರ ವಾರ್ಡ್‌ನಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಜೆಡಿಎಸ್‌ನ ಕುಟುಂಬ ರಾಜಕೀಯ
ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಕುಟುಂಬ ರಾಜಕೀಯದಂತೆ ಈ ಬಾರಿ ಉಳ್ಳಾಲದಲ್ಲೂ ಜೆಡಿಎಸ್‌ನ ಕುಟುಂಬ ರಾಜಕೀಯವಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ ಗೆ ಸೇರ್ಪಡೆಯಾಗಿದ್ದ ಮಾಜಿ ಕೌನ್ಸೆಲರ್‌ ಅಶ್ರಫ್ ಬಾವ ಕೋಡಿ ಮೂರನೇ ವಾರ್ಡ್‌ ಸೇನೆರೆ ಬೈಲು – 1ರಲ್ಲಿ ಸ್ಪರ್ಧೆಯಲ್ಲಿದ್ದರೆ, ಅಶ್ರಫ್‌ ಬಾವ ಈ ಹಿಂದೆ ಪ್ರತಿನಿಧಿಸಿದ್ದ ಉಳ್ಳಾಲ ಕೋಡಿ ವಾರ್ಡ್‌ನಲ್ಲಿ ಅವರ ಪತ್ನಿ ಹಸೀನಾ ಅಶ್ರಫ್‌ ಸ್ಪರ್ಧೆಯಲ್ಲಿದ್ದಾರೆ. 18ನೇ ಪಟ್ಲ ಗಂಡಿ ವಾರ್ಡ್‌ನಲ್ಲಿ ಈ ಹಿಂದೆ ಕಾಂಗ್ರೆಸ್‌ನಲ್ಲಿ ಕೌನ್ಸೆಲರ್‌ ಆಗಿದ್ದು, ಜೆಡಿಎಸ್‌ಗೆ ಸೇರ್ಪಡೆಗೊಂಡ ದಿನಕರ ಉಳ್ಳಾಲ್‌ ಸ್ಪರ್ಧಿಸುತ್ತಿದ್ದು, ಅವರ ಸಹೋದರ ಮಾಜಿ ಕೌನ್ಸೆಲರ್‌ ಗಂಗಾಧರ ಉಳ್ಳಾಲ್‌ ಜೆಡಿಎಸ್‌ನಲ್ಲಿ 14ನೇ ಮಂಚಿಲ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಲ್ಲೂ ದಂಪತಿ ಸ್ಪರ್ಧೆಯಲ್ಲಿದ್ದು ಮೂರನೇ ವಾರ್ಡ್‌ ಸೇನೆರೆ ಬೈಲು -1ರಲ್ಲಿ ಬಿಜೆಪಿ ಅಭ್ಯರ್ಥಿ ಮಹಮ್ಮದ್‌ ನೂರುಲ್‌ ಹಕ್‌ ಸ್ಪರ್ಧೆಯಲ್ಲಿದ್ದರೆ, ಅವರ ಪತ್ನಿ ಅಸಿಯಾ ಉಳ್ಳಾಲ ಕೋಡಿ ವಾರ್ಡ್‌ನಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.

Advertisement

ಮಾಜಿಗಳೂ ಸ್ಪರ್ಧೆಯಲ್ಲಿ
ಈ ಬಾರಿ ಮಾಜಿ ಸದಸ್ಯರೂ ಸ್ಪರ್ಧೆಯಲ್ಲಿದ್ದು, ಜೆಡಿಎಸ್‌ನಲ್ಲಿ ದಿನಕರ್‌ ಉಳ್ಳಾಲ್‌, ಗಂಗಾಧರ್‌ ಉಳ್ಳಾಲ್‌, ಝಾಕಿರ್‌ ಹುಸೇನ್‌, ಪದ್ಮಾ ವತಿ ಶೆಟ್ಟಿ ಸ್ಪರ್ಧೆಯಲ್ಲಿದ್ದಾರೆ. ಉಳಿದಂತೆ ಹೊಸ ಮುಖಗಳಿಗೆ ಈ ಬಾರಿ ಎಲ್ಲ ಪಕ್ಷಗಳು ಆದ್ಯತೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next