ಉಳ್ಳಾಲ: ಬೆಂಗಳೂರಿನಿಂದ ಬೋಳಿಯಾರ್ ಮಾರ್ಗವಾಗಿ ಕೇರಳಕ್ಕೆ ಸಾಗಾಟ ನಡೆಸುತ್ತಿದ್ದ ನಿಷàಧಿತ ಮಾದಕ ವಸ್ತು ಗಾಂಜಾ ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸ್ ಠಾಣಾ ಪಿಎಸ್‌ಐ ಶರಣಪ್ಪ ಭಂಡಾರಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳಿಂದ ಸುಮಾರು 3.19 ಲಕ್ಷ ರೂ ಮೌಲ್ಯದ ಗಾಂಜಾ ಸಹಿತ ಒಟ್ಟು 6.32 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮಲಪ್ಪುರಂ ಜಿಲ್ಲೆಯ ಪೊಣ್ಣಾನಿ ನಿವಾಸಿ ಜಂಶೀರ್ (24) ಕಾಸರಗೋಡು ಜಿಲ್ಲೆಯ ಮಂಗಳ್ಪಾಡಿ ನಿವಾಸಿ ಮಹಮ್ಮದ್ ಬಾತಿಷ್ (37) ಕಾಸರಗೋಡು ಜಿಲ್ಲೆಯ ಮುಟ್ಟತೇಡಿ ನಿವಾಸಿ ಮಹಮ್ಮದ್ ಅಶ್ರಫ್ (42) ಬಂಧಿತ ಆರೋಪಿಗಳು.
ಕೊಣಾಜೆ ಪೊಲೀಸ್ ಠಾಣಾ ಪಿಎಎಸ್‌ಐ ಶರಣಪ್ಪ ಭಂಡಾರಿ ಮತ್ತು ತಂಡ ಸೋಮವಾರ ವಿಶೇಷ ಗಸ್ತುವಿನಲ್ಲಿದ್ದಾಗ ಬೆಂಗಳೂರಿನಿಂದ ಮಾದಕ ವಸ್ತು ಮೆಲ್ಕಾರ್- ಕೊಣಾಜೆ ರಸ್ತೆಯಾಗಿ ಕಾರಿನಲ್ಲಿ ಸಾಗಾಟ ನಡೆಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯಂತೆ ಚೇಳೂರಿನ ಚೆಕ್‌ಪೋಸ್ಟ್‌ನಲ್ಲಿ ಕಾರನ್ನು ತಪಾಸಣೆ ನಡೆಸಿದ್ದು, ಈ ಸಂದರ್ಭ ಆಲ್ಟೋ ಕಾರಿನಲ್ಲಿ 3,19 ಲಕ್ಷ ರೂ. ಮೌಲ್ಯದ 32.195 ಕೆ.ಜಿ ನಿಷೇಧಿತ ಗಾಂಜಾ, 13 ಸಾವಿರ ಮೌಲ್ಯದ ನಾಲ್ಕು ಮೊಬೈಲ್ ಫೋನ್, ಗಾಂಜಾ ತುಂಬಿಸಿದ್ದ ಎರಡು ಟ್ರಾವೆಲ್ ಬ್ಯಾಗ್, ಮೂರು ಲಕ್ಷ ರೂ. ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಸಹಾಯಕ ಪೊಲೀಸ್ ಆಯುಕ್ತ ದಿನಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪಿಎಸ್‌ಐ ಶರಣಪ್ಪ ಭಂಡಾರಿ, ಸಿಬಂದಿ ಶೈಲೇಂದ್ರ, ಮಹಮ್ಮದ್ ಶರೀಫ್, ಮಹೇಶ್, ಪುರುಷೋತ್ತಮ, ದೀಪಕ್, ಅಶ್ವಿನ್, ಸುರೇಶ್ ಭರಮ ಬಡಿಗೇರ್, ರೇಷ್ಮಾ, ಸುನಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.