ಉಳ್ಳಾಲ: ತಾಯಿಯ ಹುಟ್ಟುಹಬ್ಬಕ್ಕೆ ಕರೆ ಮಾಡಲಾಗಿಲ್ಲ ಎಂದು ನೊಂದು ಡೆತ್ ನೋಟ್ ಬರೆದಿಟ್ಟು ನಗರದ ಹೊರವಲಯದ ತಲಪಾಡಿಯ ಖಾಸಗಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪೂರ್ವಜ್ (14) ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ತಾಯಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ವಸತಿ ಶಾಲೆಯ ಹಾಸ್ಟೆಲ್ ಸಿಬಂದಿ ಮೊಬೈಲ್ ನೀಡಿಲ್ಲ ಎಂದು ಕಾರಣ ನೀಡಿ ಬೆಂಗಳೂರು ಹೊಸಕೋಟೆ ಮೂಲದ ರಮೇಶ್ ಅವರ ಪುತ್ರ ಪೂರ್ವಜ್ ಹಾಸ್ಟೆಲ್ ರೂಮಿನ ರ್ಯಾಕ್‌ಗೆ ನೈಲಾನ್ ಹಗ್ಗ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾನೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿರುವ ಪೂರ್ವಜ್ ಹೆತ್ತವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಲೆಯ ನಿಯಮ ಏನಿದೆ ಎಂದು ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.