Advertisement

ಎನ್‌ಐಎಯಿಂದ ಉಕ್ರೇನ್‌ ವ್ಯಕ್ತಿ ವಿಚಾರಣೆ

12:49 AM May 09, 2019 | Lakshmi GovindaRaj |

ಬೆಂಗಳೂರು: ಶ್ರೀಲಂಕಾ ಪ್ರಜೆ ಇರಬಹುದೆನ್ನುವ ಶಂಕೆ ಮೇರೆಗೆ ಬಂಧಿತನಾಗಿರುವ ಜೋಯೆಲ್‌ ನಿರುಶನ್‌ ಸ್ಯಾಮ್ಯುಯಲ್‌ (32)ನನ್ನು ರಾಷ್ಟ್ರೀಯ ತನಿಖಾ ತಂಡಗಳು ತೀವ್ರ ವಿಚಾರಣೆಗೊಳಪಡಿಸಿವೆ.

Advertisement

ನಕಲಿ ಪಾಸ್‌ಪೋರ್ಟ್‌ ಬಳಸಿ ಉಕ್ರೇನ್‌ನಿಂದ ಆಗಮಿಸಿದ್ದ ಸ್ಯಾಮ್ಯುಯಲ್‌ನನ್ನು ಏ.29ರಂದು ಬಂಧಿಸಿದ್ದ ವಲಸೆ ಅಧಿಕಾರಿಗಳು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಠಾಣೆಯಲ್ಲಿ ದೂರು ದಾಖಲಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಷ್ಟ್ರ ಹಾಗೂ ರಾಜ್ಯ ಗುಪ್ತಚರ ದಳಗಳು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಧಿಕಾರಿಗಳು ಪ್ರತ್ಯೇಕವಾಗಿ ಆರೋಪಿ ಸ್ಯಾಮ್ಯುಯಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಆತನ ಹಿನ್ನೆಲೆ, ಯಾವ ಉದ್ದೇಶಕ್ಕೆ ಉಕ್ರೇನ್‌ನಲ್ಲಿ ನೆಲೆಸಿದ್ದ. ಜತೆಗೆ ಆತನ ಸಂಪರ್ಕದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಮತ್ತೂಂದೆಡೆ ಆರೋಪಿ, ತಾನು ಚೆನ್ನೈ ಮೂಲದವನು ಎಂದು ಹೇಳಿದ್ದರಿಂದ ಎಲ್‌ಟಿಟಿಇ ಸಂಪರ್ಕ ಇರಬಹುದೇ ಎಂಬ ಅನುಮಾನದೊಂದಿಗೆ ಚೆನ್ನೈನ ಉಗ್ರ ನಿಗ್ರಹ ದಳ (ಎಟಿಎಸ್‌) ಕೂಡ ಭೇಟಿ ನೀಡಿ ಆರೋಪಿಯ ವಿಚಾರಣೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಂಚನೆ ಕೇಸ್‌ನಲ್ಲಿ ಜೈಲು: ಆರೋಪಿ ಸ್ಯಾಮ್ಯುಯಲ್‌ ವಂಚನೆ ಪ್ರಕರಣ ಒಂದರಲ್ಲಿ ಉಕ್ರೇನ್‌ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗೊಂಡಿದೆ. ಜೈಲು ಶಿಕ್ಷೆ ಪೂರ್ಣಗೊಂಡಿತ್ತೇ ಅಥವಾ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದನೇ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Advertisement

“ಅವಿವಾಹಿತ’ ಪ್ರಮಾಣಪತ್ರ!: 1983ರಲ್ಲಿ ಕುಟುಂಬ ಉಕ್ರೇನ್‌ಗೆ ಸ್ಥಳಾಂತರಗೊಂಡಿದ್ದು, ಅಲ್ಲಿಯೇ ನೆಲೆಸಿದ್ದೇವೆ. ಸದ್ಯ, ಓರ್ವ ಯುವತಿಯ ಜತೆ ಲಿವಿಂಗ್‌ ರಿಲೇಶನ್‌ಶಿಪ್‌ ಹೊಂದಿದ್ದು, ಒಂದು ಮಗುವಿದೆ. ಆದರೆ, ಕಾನೂನುಬದ್ಧವಾಗಿ ಅಲ್ಲಿ ವಿವಾಹವಾಗಲು ಭಾರತದಿಂದ “ಅವಿವಾಹಿತ’ ಪ್ರಮಾಣಪತ್ರ ಅಗತ್ಯವಿದೆ. ಹೀಗಾಗಿ ಅದನ್ನು ಪಡೆಯಲು ಬೆಂಗಳೂರಿಗೆ ಬಂದಿದ್ದೆ. ನಾನು ಶ್ರೀಲಂಕಾ ಪ್ರಜೆಯಲ್ಲ, ಚೆನೈ ಮೂಲದವನು ಎಂದು ಹೇಳಿಕೆ ನೀಡಿದ್ದಾನೆ.

ಆರೋಪಿ ಮೇಲೆ ಅನುಮಾನ ಏಕೆ?: ಆರೋಪಿ ಸ್ಯಾಮ್ಯುಯಲ್‌, ಇರಿಸಾಯ ಟ್ರಿನಿಟಿ ಪರೇರಾ ಹೆಸರಿನಲ್ಲಿ ಶ್ರೀಲಂಕಾ ಪಾಸ್‌ಫೋರ್ಟ್‌ ಹೊಂದಿದ್ದಾನೆ. ಹೀಗಾಗಿ ಶ್ರೀಲಂಕಾ ಗುಪ್ತಚರ ದಳ ಆತನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಜತೆಗೆ, ಆತನ ಬಳಿ ಭಾರತದ ಮೂರು ಪಾಸ್‌ಪೋರ್ಟ್‌ಗಳಿವೆ. ಆ ಪೈಕಿ ಮೊದಲ ಪಾಸ್‌ಪೋರ್ಟ್‌ ಇದೆ. ಎರಡು ಮತ್ತು ಮೂರನೇ ಬಾರಿ ಪಡೆದ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದಾನೆ. ಆದರೆ, ಇವುಗಳ ಬಗ್ಗೆ ತನಗೇನೂ ಗೊತ್ತಿಲ್ಲ. ತಾನು ಚೆನೈ ಮೂಲದವನು ಎಂದು ಆತ ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ, ಉಕ್ರೇನ್‌ಗೆ ಮಾಹಿತಿ!: ಬಂಧಿತ ವ್ಯಕ್ತಿಯ ಬಗ್ಗೆ ಶ್ರೀಲಂಕಾ ಹಾಗೂ ಉಕ್ರೇನ್‌ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿ ಪತ್ರ ಬರೆಯಲಾಗಿದೆ. ರಾಯಭಾರ ಕಚೇರಿಗಳಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next