ಅಂಕಾರ: ಟರ್ಕಿಯ ಮೆಡಿಟರೇನಿಯನ್ ಕರಾವಳಿಯಲ್ಲಿ 14 ಸಿಬ್ಬಂದಿಗಳನ್ನು ಹೊತ್ತ ಸರಕು ಹಡಗು ಮುಳುಗಿದ ಪರಿಣಾಮ ಮೂವರು ಮೃತಪಟ್ಟು 6 ಮಂದಿ ನಾಪತ್ತೆಯಾದ ಘಟನೆ ಬುಧವಾರ ವರದಿಯಾಗಿದೆ.
ಟರ್ಕಿಯ ಇಸ್ಕೆಂಡರುನ್ ಬಂದರಿನಿಂದ ಉಕ್ರೇನ್‌ಗೆ ತೆರಳುತ್ತಿದ್ದ ಸರಕು ಹೊತ್ತ ಹಡಗು ಅಂಟಲ್ಯ ಪ್ರಾಂತ್ಯದ ಕುಮ್ಲುಕಾ ಪ್ರದೇಶದ ಕರಾವಳಿ ಭಾಗದಲ್ಲಿ ಜೋಯಿ 2 ಹಡಗು ಮುಳುಗಡೆಯಾಗಿದೆ ಎಂದು ಗವರ್ನರ್ ಎರ್ಸಿನ್ ಯಾಜಿಸಿ ಹೇಳಿದ್ದಾರೆ.
ಹಡಗಿನಲ್ಲಿ ಅಲ್ಯೂಮಿನಿಯಂ ಸರಕುಗಳನ್ನು ಸಾಗಿಸಲಾಗುತ್ತಿತ್ತು ಎಂದು ಅನಾಡೋಲು ಏಜೆನ್ಸಿ ತಿಳಿಸಿದೆ.
ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಆರು ಮಂದಿ ನಾಪತ್ತೆಯಾಗಿದ್ದಾರೆ ಅಲ್ಲದೆ ಐವರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಸದ್ಯ ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ.
ಟರ್ಕಿಯ ಕೋಸ್ಟ್ ಗಾರ್ಡ್ ಕಮಾಂಡ್ ಹೇಳಿಕೆ ಪ್ರಕಾರ ತನಗೆ ಮುಂಜಾನೆ 3:47 ಕ್ಕೆ ಹಡಗು ಮುಳುಗುತ್ತಿರುವ ಕುರಿತು ಕರೆ ಬಂದಿದೆ ಆ ಕೂಡಲೇ ರಕ್ಷಣೆಗಾಗಿ ಹಡಗು, ಎರಡು ಹೆಲಿಕಾಪ್ಟರ್‌ಗಳನ್ನು ರವಾನಿಸಲಾಗಿದೆ ಈ ವೇಳೆ ರಕ್ಷಣಾ ಸಿಬ್ಬಂಧಿ ಐವರನ್ನು ರಕ್ಷಣೆ ಮಾಡಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸಿರಿಯನ್ ಪ್ರಜೆಗಳಾಗಿದ್ದಾರೆ ಎನ್ನಲಾಗಿದ್ದು, ಚಂಡಮಾರುತದಿಂದ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ರಕ್ಷಣಾ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Jammu Kashmir: ಪೊಲೀಸ್ ಕಸ್ಟಡಿಯಿಂದ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರು ಪರಾರಿ