Advertisement

ಉಕ್ಕುಡ : ಕಾರು ಬರೆಗೆ ಢಿಕ್ಕಿ, ಇಬ್ಬರ ಸಾವು 

03:45 AM Jan 17, 2017 | Team Udayavani |

ವಿಟ್ಲ : ವಿಟ್ಲಕಸಬಾ ಗ್ರಾಮದ ಉಕ್ಕುಡ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಸಮೀಪದ ವಸತಿ ನಿಲಯದ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರೊಂದು ರಸ್ತೆ ಬದಿಯ ಬರೆಗೆ ಹಾಗೂ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

Advertisement

ಈ ಅಪಘಾತದಲ್ಲಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕಡಂಬು ಬದಿಯಾರು ನಿವಾಸಿ ಸುಲೈಮಾನ್‌ (60) ಮತ್ತು 3 ತಿಂಗಳ ಮಗು ಶಹಜಾನ್‌ಮೃತಪಟ್ಟಿದ್ದಾರೆ. ಸೆಲ್ಮಾ (45), ಮಹಮ್ಮದ್‌ (32), ಝೊಹರಾ(29), ನಿಹಾ (7), ಸೆ„ಫಾ (3ತಿಂಗಳು) ನಸೀರಾ(22), ಬೀಪಾತುಮ್ಮ(35) ಗಂಭೀರವಾಗಿ ಗಾಯಗೊಂಡಿದ್ದಾರೆ. 

ಗಾಯಾಳುಗಳನ್ನು ವಿಟ್ಲ, ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವಿವಿಧ ಖಾಸಗೀ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್‌ ಅವರ ಮಾರ್ಗದರ್ಶದಲ್ಲಿ ವಿಟ್ಲ ಠಾಣೆಯ ಸಹಾಯಕ ಠಾಣಾಧಿಕಾರಿ ಕಿಟ್ಟು ಮೂಲ್ಯ, ಪೊಲೀಸರಾದ ಹರಿಶ್ಚಂದ್ರ, ಸತೀಶ್‌ ಪರಿಸ್ಥಿತಿ ನಿಭಾಯಿಸಿದರು. ಗಾಯಾಳು ಬೀಪಾತುಮಾ ಅವರ ಪತಿ ಕಾಶಿಮಠ ಯೂಸುಫ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಹೇಗೆ ಸಂಭವಿಸಿತು ?
ಬಂಧುಗಳು ಜತೆಗೂಡಿ ಕಡಂಬು ಬದಿಯಾರು ಕಡೆಯಿಂದ ವಿಟ್ಲ ಮೂಲಕ ಪುಣಚದ ಬಂಧುಗಳ ಮನೆಗೆ ಮಗುವಿನ ಹುಟ್ಟುಹಬ್ಬ ಆಚರಣೆಗೆ ತೆರಳುತ್ತಿದ್ದರು. ಮಹಮ್ಮದ್‌ ಅವರು ಕಾರು ಚಲಾಯಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ, 50 ಮೀಟರ್‌ ದೂರದಲ್ಲಿ ರಸ್ತೆ ಬದಿಯ ಚರಂಡಿಯ ಪಕ್ಕದ ಮಣ್ಣಿನ ದಿಬ್ಬ ಹಾಗೂ ಆವರಣ ಗೋಡೆಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ನಜ್ಜುಗುಜ್ಜಾಗಿದೆ.

ಬಂಧುಗಳೇ ಇದ್ದರು 
ಕಾರಿನಲ್ಲಿ ಪರಸ್ಪರ ಬಂಧುಗಳೇ ಇದ್ದರು. ಸುಲೈಮಾನ್‌, ಅವರ ಪತ್ನಿ ಸೆಲ್ಮಾ, ಪುತ್ರಿ ನಸೀರಾ, ಮೊಮ್ಮಗು ಶಹಜಾನ್‌, ಸೆಲ್ಮಾ ಸಹೋದರ ಮಹಮ್ಮದ್‌(ಕಾರು ಚಾಲಕ), ಅವರ ಪತ್ನಿ ಝೊಹರಾ, ಅವರ ಮಕ್ಕಳಾದ ನಿಹಾ, ಸೈಫಾ, ಸೆಲ್ಮಾ ಅವರ ಸಹೋದರಿ ಬೀಪಾತುಮಾ ಇದ್ದರು. ಸುಲೈಮಾನ್‌ ದ್ವಿತೀಯ ಪುತ್ರಿ ರಫಿನಾ ಅವರನ್ನು ಪುಣಚಕ್ಕೆ ವಿವಾಹ ಮಾಡಿ ನೀಡಲಾಗಿದ್ದು, ಅವರ ಮನೆಯಲ್ಲಿ ರಫಿನಾ ಪುತ್ರಿಯ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಇವರು ತೆರಳುತ್ತಿದ್ದರೆನ್ನಲಾಗಿದೆ.

Advertisement

ಮಾನವೀಯತೆ ಮೆರೆದರು 
ಕಾರು ದಿಬ್ಬಕ್ಕೆ ಬಡಿದ ಶಬ್ದ ಕೇಳಿಸಿದ ಉಕ್ಕುಡ ಜನತೆ ಸ್ಥಳದತ್ತ ಧಾವಿಸಿದರು.ಉಕ್ಕುಡ ಬಸ್ಸು ನಿಲ್ದಾಣದಲ್ಲಿ ಕನ್ಯಾನಕ್ಕೆ ತೆರಳಲು ಜನಾರ್ದನ ಪಂಜಾಜೆ ಅವರು ಕಾಯುತ್ತಿದ್ದರು. ಸದ್ದು ಕೇಳುವುದರ ಜತೆಗೆ, ಜನರು ಓಡಿ ಹೋಗುತ್ತಿರುವುದನ್ನು ಗಮನಿಸಿ, ಅವರು ತತ್‌ಕ್ಷಣ ಸ್ಪಂದಿಸಿ, 108 ವಾಹನಕ್ಕೆ ಕರೆ ಮಾಡಿದರು.ಕಾರಿನೊಳಗಿನಿಂದ ಗಾಯಾಳುಗಳನ್ನು ಹೊರ ತೆಗೆಯಲು ಅವರ ಜತೆ ಸ್ಥಳೀಯರು ಪ್ರಯತ್ನಿಸಿದರು.. ವಿಟ್ಲ 108 ವಾಹನದ ಇಎಂಟಿ ದಿನೇಶ್‌ ಹಾಗೂ ಪೈಲೆಟ್‌ ಕೆ ದಯಾನಂದ ಅವರು ಸ್ಥಳಕ್ಕಾಗಮಿಸಿ ಗಂಭೀರ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಕೆಲವರನ್ನು ವಿಟ್ಲಕ್ಕೆ ಮತ್ತೆ ಕೆಲವರನ್ನು ಮಂಗಳೂರಿಗೆ ವರ್ಗಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next