ಲಂಡನ್: ಶಸ್ತ್ರಾಸ್ತ್ರ ವ್ಯಾಪಾರದ ಮಧ್ಯವರ್ತಿ, ಸಲಹೆಗಾರ ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಸಂಜಯ್ ಭಂಡಾರಿ(60) ವಿರುದ್ಧ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪವಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಾಯುಪಡೆಗೆ ತರಬೇತಿ ವಿಮಾನ ಖರೀದಿ ಹಾಗೂ ಇತರೆ ಶಸ್ತ್ರಾಸ್ತ್ರ ವ್ಯವಹಾರಗಳಿಗೆ ಸಂಬಂಧಿಸಿ ವಿದೇಶಿ ಕಂಪನಿಗಳಿಂದ ಸಂಜಯ್ ಭಂಡಾರಿ ಕೋಟ್ಯಾಂತರ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ.
ಪ್ರಕರಣದ ವಿಚಾರಣೆ ನಡೆಸಿದ ಲಂಡನ್‌ನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮೈಕೆಲ್ ಸ್ನೋ, “ಭಾರತಕ್ಕೆ ಭಂಡಾರಿ ಹಸ್ತಾಂತರಿಸಲು ಯಾವುದೇ ತಕರಾರಿಲ್ಲ,’ ಎಂದು ಹೇಳಿದರು. ಜತೆಗೆ ಹಸ್ತಾಂತರಕ್ಕೆ ಆದೇಶಿಸಲು ಅಧಿಕಾರ ಹೊಂದಿರುವ ಬ್ರಿಟನ್ ಗೃಹ ಸಚಿವೆ ಸುಯೆಲ್ಲಾ ಬ್ರಾವರ್ಮನ್ ಅವರಿಗೆ ಈ ಪ್ರಕರಣದ ದಾಖಲೆಗಳನ್ನು ಕಳುಹಿಸಿದರು.