ಬೆಳ್ತಂಗಡಿ : ಸಂಸ್ಕೃತಿ, ಭಾಷೆಯಲ್ಲಿ ವಿಭಿನ್ನತೆಗಳಿದ್ದರೂ ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ನಾವು ಬದುಕಿದ್ದಾಗ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಯಾವುದೇ ವೃತ್ತಿಯನ್ನು ಪ್ರವೇಶಿಸಿದರೂ ವಿಧೇಯತೆ ಹಾಗೂ ಸಮರ್ಪಣ ಮನೋಭಾವದಿಂದ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರಿಯ ಭಾವೈಕ್ಯತಾ ಶಿಬಿರದ ಶಿಬಿರಾರ್ಥಿಗಳ ಧರ್ಮಸ್ಥಳ ಭೇಟಿಯ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರು ರಾಜ್ಯಗಳ ಶಿಬಿರಾರ್ಥಿಗಳು, ಯೋಜನಾಧಿಕಾರಿ ಗಳು, ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀನಾಥ್ ಎಂ.ಪಿ. ಮತ್ತಿತರರು ಉಪಸ್ಥಿತರಿದ್ದರು. ಶಿಬಿರದ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ಶೆಂಡ್ಯೆ ಸ್ವಾಗತಿಸಿ, ವಂದಿಸಿದರು.
ದೇಶಪ್ರೇಮ
ಪರಸ್ಪರ ನಂಬಿಕೆ, ಅರ್ಥೈಸಿಕೊಳ್ಳುವಿಕೆ, ದೇಶಪ್ರೇಮ ಮೂಡಿಸಲು ಶಿಬಿರಗಳು ಸಹಕಾರಿ. ಮುಂದಿನ ಪೀಳಿಗೆಗೆ ಸಂಪದ್ಭರಿತ ದೇಶವನ್ನು ವರ್ಗಾಯಿಸುವ ಕಾರ್ಯ ಮಾಡಬೇಕು. ಸುತ್ತಮುತ್ತಲಿನ ಪ್ರಪಂಚದ ಕುರಿತು ಮಾತ್ರ ಚಿಂತಿಸದೆ ಒಳಗಣ್ಣನ್ನು ತೆರೆದು ವಿಶಾಲವಾಗಿ ನೊಡುವ ಪ್ರಯತ್ನವಾಗಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ