ಬೆಳ್ತಂಗಡಿ: ಉಜಿರೆ ನಿವಾಸಿ, ಉದ್ಯಮಿ, ನಿವೃತ್ತ ಸೈನಿಕ ಎ.ಕೆ.ಶಿವನ್ ಮೊಮ್ಮಗ ಅಪಹರಣ ಪ್ರಕರಣದ ಹಿಂದೆ ಬಹುತೇಕ ಹಣದ ವ್ಯವಹಾರವೇ ಮೂಲ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಖಚಿತ ಪಟ್ಟಿದೆ.
ಪ್ರಕರಣದ ಆರು ಮಂದಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ವ್ಯವಹಾರದಲ್ಲಿ ಪ್ರಕರಣದ ರೂವಾರಿಗೆ ಬಿಜೋಯ್ 1.50 ಕೋ.ರೂ. ನೀಡದೆ ವಂಚನೆ ಎಸಗಿರುವ ಕುರಿತು ಅಪಹರಣಕಾರರು ಬಾಯಿ ಬಿಟ್ಟಿದ್ದಾರೆ. ಆದರೆ ಪ್ರಕರಣದಲ್ಲಿ 8 ಆರೋಪಿಗಳಿದ್ದು ಹಾಸನ ಮೂಲದ ಪ್ರಮುಖ ಆರೋಪಿ ಹಾಗೂ ಬೆಂಗಳೂರಿನ ಚಾಮರಾಜನಗರ ನಿವಾಸಿ ಸೆರೆ ಸಿಕ್ಕ ಬಳಿಕ ಸ್ಪಷ್ಟ ಚಿತ್ರಣ ಹೊರಬರಲಿದೆ.
ಅಪಹರಣ ನಡೆದ ದಿನ ಉಜಿರೆ ಆಟೋ ಚಾಲಕ ನೀಡಿದ ಮಾಹಿತಿಯಂತೆ ಆರಂಭದಲ್ಲಿ ಒಟ್ಟು 5 ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಅವರಿಂದ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಚಿಕ್ಕಮಗಳೂರಿನಲ್ಲಿ ಇಬ್ಬರನ್ನು ತನಿಖೆ ತಂಡ ವಶಕ್ಕೆ ಪಡೆದಾಗ ಪ್ರಕರಣದ ಮೂಲ ಆರೋಪಿಗಳ ಪತ್ತೆ ಸಾಧ್ಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಆರೋಪಿಗಳು ಘಟನೆ ನಡೆಯುವ 10 ದಿನ ಮುಂಚಿತವಾಗಿ ಧರ್ಮಸ್ಥಳಕ್ಕೆ ಆಗಮಿಸಿ, ಲಾಡ್ಜ್ ಒಂದರಲ್ಲಿ ಉಳಿದುಕೊಂಡು ಪರಿಸ್ಥಿತಿ ಅವಲೋಕನ ಮಾಡುತ್ತಿದ್ದರು. ಘಟನೆಗೆ ಬೆಂಗಳೂರಿನ ಸಂಪರ್ಕ ಇರುವ ಮಾಹಿತಿಯಿದೆ. ಶೀಘ್ರದಲ್ಲಿ ಎಲ್ಲ ಮಾಹಿತಿಗಳು ಹೊರಬೀಳಲಿವೆ ಎಂದು ತಿಳಿಸಿದರು.
ಉಜಿರೆ ಬಾಲಕ ಅಪಹರಣ ಪ್ರಕರಣದ ಬಹುತೇಕ ಮಾಹಿತಿ ಲಭಿಸಿದೆ. ಪ್ರಕರಣ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ಶೀಘ್ರ ಬಂಧಿಸುವ ಸಾಧ್ಯತೆ ಇದೆ. ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಪತ್ತೆ ಕಾರ್ಯ ನಡೆಸಲಾಗುವುದು
– ಬಿ.ಎಂ.ಲಕ್ಷ್ಮೀಪ್ರಸಾದ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ